ಎಐಎಡಿಎಂಕೆಗೆ ಬಿಜೆಪಿ ಗಾಳ : ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಭಗೀರಥ ಯತ್ನ

ನವದೆಹಲಿ, ಫೆ. ೧೭ – ತಮಿಳುನಾಡಿನಲ್ಲೀಗ ಬೀಸುತ್ತಿರುವ ಹೊಸ ರಾಜಕೀಯ ಗಾಳಿಯಲ್ಲಿ ಸ್ವಂತ ಆಧಾರವಿಲ್ಲದೇ ಹೆಣಗುತ್ತಿರುವ ಬಿಜೆಪಿ ತೇಲಿ ಬರಲು ಹವಣಿಸುತ್ತಿದ್ದು, ತನ್ನ ಲೆಕ್ಕಾಚಾರಗಳು ತಲೆಕೆಳಗಾದರೂ ಮತ್ತೆ ಅಣ್ಣಾ ಡಿಎಂಕೆಗೆ ಗಾಳ ಹಾಕಿ ಸೆಳೆದುಕೊಳ್ಳುವ ಸರ್ವಪ್ರಯತ್ನದಲ್ಲಿ ತೊಡಗಿದೆ.
ಚಿನ್ನಮ್ಮನ ಬಂಟ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಿದ್ದರೂ ಒಳಗುದಿಯ ರಾಜಕೀಯ ಭವಿಷ್ಯದಲ್ಲಿ ಅಲ್ಲಿ ಸ್ಥಿರ ಸರ್ಕಾರ ಕಾರ್ಯನಿರ್ವಹಣೆ ಸಾಧ್ಯವಿಲ್ಲ ಎಂಬತಹ ಪರಿಸ್ಥಿತಿ ನಿರ್ಮಾಣಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಒಂದಲ್ಲ ಒಂದು ತೆರನಾಗಿ ತೆರೆಮರೆ ಪ್ರಯತ್ನ ನಡೆಸುತ್ತಿರುವುದು ಹೊಸದೇನಲ್ಲ. ಆದರೆ, ಪಳನಿಸ್ವಾಮಿ ಎಷ್ಟರ ಮಟ್ಟಿಗೆ ರಾಜಕೀಯ ಚದುರಂಗದಲ್ಲಿ ದಾಳಗಳನ್ನು ಉರುಳಿಬಿಡುತ್ತಾರೆ ಎನ್ನುವುದರ ಮೇಲೆ ಎಲ್ಲ ಲೆಕ್ಕಾಚಾರಗಳೂ ನಿಂತಿವೆ.
ಕಂಬಿ ಹಿಂದೆ ಕೊಳೆಯುತ್ತಿರುವ ಚಿನ್ನಮ್ಮನ ಪ್ರಭಾವ ಎಷ್ಟು ದಿನ ನಡೆದೀತು? ಈಕೆಯು ಜಯಲಲಿತಾ ರೀತಿ ಸತತವಾಗಿ ಪಕ್ಷದ ಮೇಲೆ ವರ್ಚಸ್ಸು ಉಳಿಸಿಕೊಳ್ಳಲು ಸಾಧ್ಯವೆ? ಅಥವಾ ಈ ಜೈಲು ಹಕ್ಕಿಯನ್ನು ಅಣ್ಣಾ ಡಿಎಂಕೆ ನಾಯಕರು ನಿರ್ಲಕ್ಷಿಸಿ ಹೊಸ ಹಾದಿ ತುಳಿಯುವರೇ ಎಂಬ ಕುತೂಹಲ ಈಗ ಎಲ್ಲರಲ್ಲಿದೆ.
ಈ ಮಧ್ಯೆ ಜಯಲಲಿತಾ ನಿಷ್ಠಾವಂತ ಪನ್ನೀರ್‌ಸೆಲ್ವಂ ಮತ್ತೆ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವುದು ಈ ಗುಂಪಿನ ನಿಷ್ಕ್ರಿಯತೆಯೋ ಅಥವಾ ಕಾದು ನೋಡುವ ತಂತ್ರವೋ ಎಂಬ ಅನುಮಾನ ಹುಟ್ಟಿಸದೆ ಇರದು. ಅಣ್ಣಾ ಡಿಎಂಕೆಯ ಶಾಸಕರ ಬೆಂಬಲಕ್ಕೆ ಬದಲಾಗಿ ಈಗ ಅವರು ವಿರೋಧಿ ಡಿಎಂಕೆ ಮತ್ತು ಕಾಂಗ್ರೆಸ್ಸಿನ ಸುತ್ತಮುತ್ತ ಸುಳಿದಾಡುತ್ತಿರುವುದು ಅವರ ಸಹಕಾರಯಾಚನೆಗಾಗಿ ಎಂದೇ ಈ ಪನ್ನೀರ್ ನಡೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕಳವಳ ಉಂಟು ಮಾಡಿದೆ.
ಪನ್ನೀರ್ ಹಿಂದೆ ಪ್ರಧಾನಿ ಮೋದಿ ಇದ್ದಾರೆ ಎಂಬ ಬಲವಾದ ವದಂತಿಗಳಿದ್ದದ್ದು ಈಗ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾಗಿದ್ದಾರೆ ಎಂದರೆ ಬಿಜೆಪಿ ಕೂಡ ಅವರ ಈ ನಡೆಗೆ ಅಸಮಾಧಾನಗೊಂಡು ಕೈಬಿಟ್ಟಿತ್ತೇನೋ ಎಂಬ ಶಂಕೆ ಉದ್ಭವಿಸುತ್ತದೆ.
ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಮೊದಲಿನಿಂದಲೂ ಅಣ್ಣಾ ಡಿಎಂಕೆಯನ್ನು ತನ್ನ ಬಣದ ಎಣಿಕೆಯಲ್ಲೇ ಇಟ್ಟುಕೊಂಡಿತ್ತು. ಈಗ ಅಲ್ಲಿನ ಸರ್ಕಾರದಲ್ಲಿ ಬಿಜೆಪಿ ವಿರುದ್ಧದ ಗಾಳಿ ಬೀಸುತ್ತಿರುವುದನ್ನು ಅರಿತುಕೊಂಡಿರುವ ಆ ಪಕ್ಷ ಪನ್ನೀರ್‌ರನ್ನು ಕೈಬಿಟ್ಟು ರಾಷ್ಟ್ರಪತಿ ಆರಿಸಲು ಮತ್ತೆ ಸಂಸತ್ತಿನಲ್ಲಿ ಬೆಂಬಲಕ್ಕಾಗಿ ಪಳನಿಸ್ವಾಮಿಯ ಹಿಂದೆ ಬೀಳುವ ಸಂಭವವೇ ಅಧಿಕವಾಗಿದೆ. ಪನ್ನೀರ್‌ರಿಂದ ಇನ್ನು ಏನೂ ಉಪಯೋಗವಾಗದು ಎಂದು ನಿಶ್ಚಯಿಸಿ ಪಳನಿಯಿಂದಾಗಬಹುದಾದ ಲಾಭಗಳತ್ತ ಕಣ್ಣು ಹಾಕಿದೆ. ನಾಳಿನ ವಿಧಾನಸಭಾ ಅಧಿವೇಶನದಲ್ಲಿ ಯಾವುದಾದರೂ ಪವಾಡ ನಡೆಯದ ಹೊರತು ಬಹುತೇಕ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸುವುದು ಖಚಿತವಾಗಿದ್ದು, ಪನ್ನೀರ್‌ರನ್ನು ಹಿಂದೆ ಹಾಕಿ ಪಳನಿ ನಾಗಾಲೋಟದಲ್ಲಿ ಓಡಲು ಹಾಗೂ ಅಣ್ಣಾ ಡಿಎಂಕೆಗೆ ಜಯಲಲಿತಾ ನಂತರದಲ್ಲಿ ನಾಯಕತ್ವ ನೀಡಲು ಸಜ್ಜಾಗತೊಡಗಿದ್ದಾರೆ.
ಒಪಿಎಸ್‌ಗೆ ಚಿನ್ನಮ್ಮನ ಶಕ್ತಿಯನ್ನು ಅಂದಾಜು ಮಾಡಿ ಅದಕ್ಕೆ ಪ್ರತಿತಂತ್ರ ರೂಪಿಸುವುದಕ್ಕೆ ಅಪಾರ ಕಾಲಾವಕಾಶ ದೊರೆತರೂ ಸಾಧ್ಯವಾಗದೆ ಹೋದದ್ದು ಅವರಿಗೆ ರಾಜಕೀಯ ಮುತ್ಸದ್ಧಿತನದ ಕೊರತೆಯಿರುವುದನ್ನು ಸಾಬೀತು ಮಾಡುತ್ತದೆ. ಶಶಿಕಲಾ ನಾಯಕತ್ವಕ್ಕೆ ಪನ್ನೀರ್ ನಾಯಕತ್ವವನ್ನೇ ಎಲ್ಲರೂ ಬಯಸುತ್ತಿದ್ದರೂ ರಾಜಕೀಯ ಬಲಾಬಲಗಳ ಪ್ರದರ್ಶನದಲ್ಲಿ ಅವರು ಸೋತಿದ್ದಾರೆ ಮಾತ್ರವಲ್ಲ, ಜಯಲಲಿತಾ ಪರಂಪರೆ ಮುಂದುವರೆಸುವ ನಾಯಕತ್ವ ತಮ್ಮಲ್ಲಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ.
ಜೈಲಿನಲ್ಲಿರುವ ಚಿನ್ನಮ್ಮ ತಾನೇ ಪಕ್ಷದ ಪ್ರಮುಖ ಸ್ಥಾನಕ್ಕೆ ತಂದು ಕೂರಿಸಿರುವ ತನ್ನ ಅಳಿಯಂದಿರ ಮೂಲಕ ಸರ್ಕಾರದ ಮೇಲೆ ಎಷ್ಟರ ಮಟ್ಟಿಗೆ ನಿಯಂತ್ರಣ ಗಳಿಸುತ್ತಾರೆ ಎಂಬುದೂ ಕುತೂಹಲಕರ ವಿಚಾರ.
ಪನ್ನೀರ್ ಮತ್ತು ಪಳನಿ ನಡುವಿನ ಅಧಿಕಾರದ ಕಿತ್ತಾಟ ತಮಿಳುನಾಡಿಗೆ ಸ್ಥಿರ ಸರ್ಕಾರ ನೀಡುವುದಕ್ಕೆ ಬದಲಾಗಿ ಆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾಗುವುದು ನಿಚ್ಚಳವಾಗಿದೆ. ಚಿನ್ನಮ್ಮ ಈಗ ತಾನು ಅನುಭವಿಸಿರುವ ಸಂಕಷ್ಟಗಳಿಗೆಲ್ಲಾ ಮೋದಿಯೇ ಕಾರಣವೆಂದು ಶಪಿಸುತ್ತಿದ್ದು, ತನ್ನ ಹಿಡಿತದ ಸರ್ಕಾರ ಸುಲಭವಾಗಿ ಬಿಜೆಪಿ ಪರ ವಾಲಲು ಬಿಡುವುದಿಲ್ಲ ಎಂಬುದಂತೂ ಸತ್ಯಸ್ಯ ಸತ್ಯ. ಏಕೆಂದರೆ ಆಕೆ ವ್ಯವಹಾರ ಚತುರೆ, ಸ್ಪರ್ಧಿ, ದುರಾಸೆಯ ಲೆಕ್ಕಾಚಾರದ ನಿಪುಣೆ. ತನ್ನ ಬಂಟ ಪಳನಿಯ ಮೂಲಕ ಕೇಂದ್ರದ ಮೇಲೆ ತನ್ನ ಈ ಎಲ್ಲಾ ಮತ್ಸರವನ್ನು ಆಕೆ ಪ್ರಯೋಗಿಸಲು ಸದಾವಕಾಶಕ್ಕಾಗಿ ಕಾಯುತ್ತಿದ್ದು, ಪಳನಿ ಕಂಬಿ ಎಣಿಸುತ್ತಿರುವ ತನ್ನ ನಾಯಕಿಗೆ ಎಷ್ಟು ನಿಷ್ಠನಾಗಿರುತ್ತಾನೆ ಎಂಬುದರ ಮೇಲೆ ಈ ಎಲ್ಲಾ ಲೆಕ್ಕಾಚಾರಗಳು ನಿಂತಿವೆ. ಏಕೆಂದರೆ ಮೋದಿ ನೇತೃತ್ವದ ಬಿಜೆಪಿಯಲ್ಲೂ ಚಿನ್ನಮ್ಮನಿಗೆ ಚಳ್ಳೆಹಣ್ಣು ತಿನ್ನಿಸುವಂತಹ ತಂತ್ರಗಾರಿಕೆ ರೂಪಿಸುವ ಪ್ರಚಂಡರಿದ್ದಾರೆ ಎಂಬುದನ್ನೂ ಮರೆಯುವಂತಿಲ್ಲ.
ಚಿನ್ನಮ್ಮ ತನ್ನ ಮೇಲೆ ಬಂದಿರುವ ಎಲ್ಲಾ ಕಳಂಕಗಳನ್ನೂ ನಿವಾರಿಸಿಕೊಳ್ಳಲು ಮೇಲ್ಮನವಿ ಸಲ್ಲಿಸುವ ಮತ್ತೊಂದು ಪ್ರಯತ್ನ ಮಾಡಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆಯುವುದಾಗದೆಂದು ಸುಪ್ರೀಂಕೋರ್ಟ್ ಆರಂಭದಲ್ಲೇ ಆಕೆಯ ಷಢ್ಯಂತ್ರವನ್ನು ಚಿವುಟಿ ಹಾಕಿದೆ. ಬಿಜೆಪಿ ತಮಿಳುನಾಡಿನ ರಾಜಕೀಯ ಬೆಳವಣಿಗೆ ಹಗ್ಗೆ ಪ್ರತಿಕ್ರಿಯಿಸಿ ಅದು ಅಣ್ಣಾ ಡಿಎಂಕೆಯ ಆಂತರಿಕ ವಿಚಾರ; ತಮ್ಮ ಪಕ್ಷವಾಗಲಿ, ಕೇಂದ್ರ ಸರ್ಕಾರವಾಗಿ ಇದರಲ್ಲಿ ಮೂಗು ತೂರಿಸದು ಎಂದು ಹೇಳಿಕೊಂಡಿದ್ದರೂ ಒಳಗೊಳಗೇ ಅದಕ್ಕೆ ದಿಗಿಲಾಗಿರುವುದಂತೂ ಸ್ಪಷ್ಟ. ಈ ಹಿನ್ನೆಲೆಯಲ್ಲಿ ಅಲ್ಲಿ ಮಧ್ಯಂತರ ಚುನಾವಣೆಯ ಅನಿವಾರ್ಯತೆ ಬಂದರೂ ಆಶ್ಚರ್ಯವಿಲ್ಲ.

Leave a Comment