ಎಂ.ಎಸ್.ಎಂ.ಇ. ಹಿತಕಾಯಲು ಕೇಂದ್ರಕ್ಕೆ ಕಾಸಿಯಾ ಒತ್ತಾಯ

ಬೆಂಗಳೂರು, ಆ. ೧೦- ಕೈಗಾರಿಕಾ ಘಟಕಗಳ ಸ್ಥಾಪನೆ ಮತ್ತು ಯಂತ್ರೋಪಕರಣಗಳ ಅಳವಡಿಕೆಗೆ ಮಾಡಿದ ಹೂಡಿಕೆಯನ್ನು ಆಧರಿಸುವ ಬದಲಿಗೆ ವಾರ್ಷಿಕ ವಹಿವಾಟನ್ನು ಪರಿಗಣಿಸಿ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂ.ಎಸ್.ಎಂ.ಇ.) ವರ್ಗೀಕರಿಸುವ ಕೇಂದ್ರ ಸಚಿವ ಸಂಪುಟದ ನಿರ್ಣಯದ ಬಗ್ಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೇಶದಲ್ಲಿ ಬಂಡವಾಳದ ಕೊರತೆಯಿದ್ದು, ಸಣ್ಣ ಕುಟುಂಬಗಳು ಜೀವನ ನಿರ್ವಹಣೆಗೆ ಗುಡಿ ಕೈಗಾರಿಕೆಗಳಲ್ಲಿ ಅವಲಂಬಿಸಿರುವ ಮೇಲೆ ಕೇಂದ್ರ ಸಚಿವ ಸಂಪುಟದ ಇಂಥಹ ನಿರ್ಣಯ ಸಣ್ಣ ಉತ್ಪಾದನಾ ಘಟಕ ಅಸ್ಥಿತ್ವವನ್ನು ಅಲುಗಾಡಿಸುತ್ತದೆ ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್.ಎಸ್.ಜವಳಿಯವರು ಪತ್ರಿಕಾಗೋಷ್ಠಿಯಲ್ಲಿಂದು ಆತಂಕ ವ್ಯಕ್ತಪಡಿಸಿದರು.
ಎಂ.ಎಸ್.ಎಂ.ಇ. ವ್ಯಾಪ್ತಿಯಲ್ಲಿ ದೊಡ್ಡ ಸಂಸ್ಥೆಗಳನ್ನು ತರುವುದರಿಂದ ಈ ವಲಯದಲ್ಲಿನ ಹಿತಾಸಕ್ತಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ಇದರಿಂದ ಬಹುತೇಕ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಹಾಗಾಗಿ ಹಳೆಯ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಸಣ್ಣ ಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಮುಖ್ಯವಾಗಿದೆ. ಕೇಂದ್ರ ಸರ್ಕಾರ ಉದ್ದೇಶಿತ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರುವ ಮುನ್ನ ಎಲ್ಲ ಪಾಲುದಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಹಾಗೂ ಪ್ರತಿನಿಧಿಗಳ ಸಲಹೆಗಳನ್ನು ಆಲಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸಚಿವ ಸಂಪುಟದ ನಿರ್ಣಯದಲ್ಲಿ ಉತ್ಪಾದನೆ ಸೇವೆಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಗಿದೆ. ಅಲ್ಲದೆ ಶೇಕ‌ಡ 20 ರಷ್ಟು ಸಾರ್ವಜನಿಕ ಸಂಗ್ರಹಣೆಯಲ್ಲಿ ಕಡ್ಡಾಯವಾದ ಪಾಲು ಹೊಂದಿರುವುದು. ಇಂದಿಗೂ ವಿವಾದವಾಗಿಯೇ ಉಳಿದುಕೊಂಡಿದೆ ಎಂದವರು. ಎಂ.ಎಸ್.ಎಂ.ಇ. ಕಾಯ್ದೆ 2006ಕ್ಕೆ ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ಹೇಳಿದರು.
ಕಿರು ಉದ್ದಿಮೆಗೆ 25 ಲಕ್ಷ ಹೂಡಿಕೆ, ಸಣ್ಣ ಉದ್ದಿಮೆಗೆ 25 ಲಕ್ಷದಿಂದ 5 ಕೋಟಿ ರೂ. ಮಧ್ಯಮ ಉದ್ದಿಮೆಗೆ 5ಕೋಟಿಯಿಂದ 10 ಕೋಟಿ ರೂ. ಹೂಡಿಕೆಯಾಗಿರುತ್ತಾರೆ. ಇದನ್ನು ಮುಂದುವರಿಸುವುದರಿಂದ ಸಣ್ಣ ಕೈಗಾರಿಕೆಗಳ ಬೆಳೆವಣಿಗೆಗೂ ಪೂರಕವಾಗಿರುತ್ತದೆ ಎಂದು ಹೇಳಿದರು.
ಕಳೆದ 10 ದಶಕಗಳಲ್ಲಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯಲ್ಲಿ ಎಂ.ಎಸ್.ಎಂ.ಇ. ಪ್ರಮುಖ ಸ್ಥಾನಪಡೆದಿದ್ದು, ರಫ್ತು ಉದ್ಯಮಕ್ಕೆ ಶೇ. 25 ರಿಂದ 35 ರಷ್ಟು ಜಿಎಸ್‌ಟಿ ಹೆಚ್ಚು ತೆರಿಗೆ ಪಾವತಿಸುವಲ್ಲಿ ಹಾಗೂ ಒಟ್ಟು ದೇಶೀಯ ಉತ್ಪನ್ನ 9 ಜಿಡಿಪಿ ಹಾಗೂ ಆರ್ಥಿಕ ಪ್ರಗತಿಯ ಒತ್ತೇಜನಕ್ಕೆ ಎಂ.ಎಸ್.ಎಂ.ಇ. ಅತಿದೊಡ್ಡ ಕೊಡುಗೆ ನೀಡಿದೆ ಎಂದು ತಿಳಿಸಿತ್ತು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಉಪಾಧ್ಯಕ್ಷ ಆರ್. ರಾಜು, ಗೌರವ ಕಾರ್ಯದರ್ಶಿ ರವಿಕಿರಣ ಕುಲಕರ್ಣಿ, ಗೌರವ್ ಜಂಟಿ ಕಾರ್ಯದರ್ಶಿ(ನಗರ) ಸುರೇಶ್.ಎನ್.ಸಾಗರ್, ಗೌರವ ಜಂಟಿ ಕಾರ್ಯದರ್ಶಿ (ಗ್ರಾಮೀಣ) ಎಸ್. ವಿಶ್ವೇಶ್ವರಯ್ಯ, ಗೌರವ ಖಜಾಂಚಿ ಶ್ರೀನಾಥ್ ಭಂಡಾರಿ ಉದ್ಯಾವರ್ ಉಪಸ್ಥಿತರಿದ್ದರು.

Leave a Comment