ಎಂ.ಎಲ್.ಸಿ.ಯನ್ನಾಗಿ ಸಿದ್ದಣ್ಣ ನೇಮಕಕ್ಕೆ ಒತ್ತಾಯ

ಬಳ್ಳಾರಿ, ಸೆ.7: ನಗರ ಸಭೆಯ ಮಾಜಿ ಅಧ್ಯಕ್ಷ ಹೆಚ್.ಸಿದ್ದಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಕೆಪಿಸಿಸಿಯ ಬಳ್ಳಾರಿ ಜಿಲ್ಲೆ ಪರಿಶಿಷ್ಟ ಜಾತಿ ವಿಭಾಗ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.

ಸಮಿತಿಯ ನಗರ ಜಿಲ್ಲಾ ಅಧ್ಯಕ್ಷ ಎಂ.ವಿ.ಎರಕುಲಸ್ವಾಮಿ ಈ ಕುರಿತು ಪತ್ರ ಬರೆದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬಳ್ಳಾರಿ ಜಿಲ್ಲೆಯ ಪ.ಜಾತಿಯಲ್ಲಿ ಬರುವ ಮಾದಿಗ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ರಾಜಕೀಯವಾಗಿ ತೀರಾ ಹಿಂದುಳಿದು, ರಾಜಕೀಯ ಅಧಿಕಾರದಿಂದ ವಂಚಿತಕ್ಕೊಳಗಾದ ಬಹುದೊಡ್ಡ ಸಮುದಾಯವಾಗಿದೆ. ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಈ ಸಮುದಾಯಕ್ಕೆ ಒಬ್ಬರೇ ಒಬ್ಬ ಶಾಸಕರು ಇಲ್ಲದ ಸಮುದಾಯವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟಜಾತಿಗೆ 2 ಮೀಸಲು ಕ್ಷೇತ್ರಗಳಲ್ಲಿ ಒಂದನ್ನು ಕೂಡಾ ಈ ಸಮುದಾಯಕ್ಕೆ ನೀಡದೇ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡುತ್ತೇವೆಂದು ಚುನಾವಣೆ ಸಂದರ್ಭದಲ್ಲಿ ವಚನ ನೀಡಿತ್ತು.

ಅದರಂತೆ ಹೆಚ್.ಸಿದ್ದಣ್ಣ ಇವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಹಾಗೂ ಕಾನೂನು ಪದವಿ ಪಡೆದು ಕಳೆದ 16 ವರ್ಷಗಳಿಂದ ಬಳ್ಳಾರಿಯ ವಕೀಲ ವೃತ್ತಿಯಲ್ಲಿ ತೊಡಗಿದ್ದು, ಹಾಗೆಯೇ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕ ನಿಷ್ಟೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 1996ರಲ್ಲಿ ಬಳ್ಳಾರಿ ನಗರಸಭೆಗೆ ಸ್ಥಳೀಯ ಚುನಾವಣೆಗಳಲ್ಲಿ 7ನೇ ವಾರ್ಡ್ ನಿಂದ ಸ್ಪರ್ಧಿಸಿ ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದು ಹಾಗೆಯೇ 2000-2001ರಲ್ಲಿ ಬಳ್ಳಾರಿ ನಗರಸಭೆಗೆ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಅಧ್ಯಕ್ಷರಾಗಿ, ಆಯ್ಕೆಗೊಂಡು ಬಳ್ಳಾರಿ ನಗರ ಜನತೆಯ ಸೇವೆ ಮಾಡಿದ್ದಾರೆ.

ಜಿಲ್ಲೆಯ ಡಿ.ಸಿ.ಸಿ.ಬ್ಯಾಂಕ್ ಗೆ ಸರ್ಕಾರದಿಂದ ನಿರ್ದೇಶಕರಾಗಿ ನಾಮನಿರ್ದೇಶನಗೊಂಡು ಜಿಲ್ಲೆಯ ರೈತರ ಹಾಗೂ ಸರ್ಕಾರಿ ರಂಗದಲ್ಲಿ ಕೂಡ ಸೇವೆ ಮಾಡಿದ್ದಾರೆ. ಕರ್ನಾಟಕ ಸಮತಾ ಸೈನಿಕದಳ ಜಿಲ್ಲಾ ಘಟಕದ ಸಂಸ್ಥಾಪಕ ಕಾರ್ಯಾಧ್ಯಕ್ಷರಾಗಿ/ಪ್ರಧಾನ ಕಾರ್ಯದರ್ಶಿಯಾಗಿ ದಲಿತಪರ ಚಳುವಳಿಯಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ದಲಿತ ಪರ ಧ್ವನಿ ಎತ್ತಿದ್ದಾರೆ. ಜಿಲ್ಲಾ ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾಗಿ ಸಮುದಾಯದ ಒಳಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ಓಬಳಾಪುರಂ ಗಣಿ, ಕಂಪನಿಯ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹಾಗೂ ಆಂಧ್ರ ಪ್ರದೇಶದ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಂಪನಿಯ ಅಕ್ರಮ ಗಣಿಗಾರಿಕೆಯ ಬಗ್ಗೆ ಹಾಗೂ ಸುಗ್ಲಮ್ಮಗುಡಿ ದ್ವಂಸ ಪ್ರಕರಣದ ಬಗ್ಗೆ ಹೋರಾಟ ಮಾಡಿದ್ದಾರೆ.

ಆ ಕಂಪನಿ ನಡೆಸಿದ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆ ಬಯಲಿಗೆ ಬರುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ.

ಸದ್ಯ ಬಳ್ಳಾರಿ ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಮಹಾ ಸಂಘದ ಕಾರ್ಯಾಧ್ಯಕ್ಷರಾಗಿ ಅಂಬೇಡ್ಕರ್ ಯುವಸೇನೆಯ ಗೌರವಾಧ್ಯಕ್ಷರಾಗಿ ವಿವಿಧ ಮಹಿಳಾ ಸ್ವ-ಸಹಾಯ ಗುಂಪುಗಳ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಯಾಶೀಲಾ ಶಿಕ್ಷಕರ ವೇದಿಕೆ (ಕಿ) ಇವರ ಉತ್ತಮ ಸಮಾಜ ಸೇವೆಗಾಗಿ ಬಸವಸಿರಿ ರಾಜ್ಯಪ್ರಶಸ್ತಿ ದೊರೆತಿದೆ. ಇವರ ಜನಪರ ಸೇವೆಗಳನ್ನು ಪರಿಗಣಿಸಿ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಸೇವೆ ಮಾಡಿರುವ ಇವರನ್ನು ಕರ್ನಾಟಕ ವಿಧಾನ ಪರಿಷತ್ ಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದ್ದಾರೆ.

 

Leave a Comment