ಎಂಬಿಎ ಪಠ್ಯಕ್ರಮ ಬದಲಾವಣೆ ಅನಿವಾರ್ಯ

ತುಮಕೂರು, ಜು. ೧೨- ಎಂ.ಬಿ.ಎ. ಒಂದು ವೃತ್ತಿಪರ ಶಿಕ್ಷಣ. ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಹಾಗೂ ಎಂಬಿಎ ವಿದ್ಯಾರ್ಥಿಗಳನ್ನು ಉದ್ಯೋಗಶೀಲರನ್ನಾಗಿಸಲು ಪಠ್ಯಕ್ರಮದ ಬದಲಾವಣೆಯ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದು ಪ್ರೊ.ಭೀಮರಾಯ ಮೇತ್ರಿ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂ.ಬಿ.ಎ. ವಿಭಾಗದ ವತಿಯಿಂದ ಏರ್ಪಡಿಸಿದ್ದ ಒಂದು ದಿನದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಂ.ಬಿ.ಎ. ಶಿಕ್ಷಣದಲ್ಲಿರುವ ಪಠ್ಯಕ್ರಮವನ್ನು ಬದಲಾವಣೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲದೆ ಶಿಕ್ಷಕರು, ಪ್ರಾಧ್ಯಾಪಕರು ಕೈಗಾರಿಕೆಗಳೊಡನೆ ಹೆಚ್ಚಿನ ಒಡನಾಟ ಹೊಂದಿರಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಂ.ಕೆ. ಶ್ರೀಧರ್, ಡಾ. ಜಯದೇವ್ ಎಂ., ಡಾ. ಆಯಿಶ ಎಂ. ಷರೀಫ್ ಹಾಗೂ ಡಾ. ಭೋಜಣ್ಣ ಭಾಗವಹಿಸಿ ಪಠ್ಯಕ್ರಮದ ಬದಲಾವಣೆ ವಿಷಯ ಕುರಿತು ತಾಂತ್ರಿಕ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಈ ವಿಚಾರಗೋಷ್ಠಿಯಲ್ಲಿ ಸುಮಾರು 50ಕ್ಕೂ ಹೆಚ್ಚು ದೇಶದ ವಿವಿಧ ಆಡಳಿತ ಸಂಸ್ಥೆಗಳ ನಿರ್ದೇಶಕರು ಹಾಗೂ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.

ಕು. ರೋಹಿಣಿ ಪ್ರಾರ್ಥಿಸಿದರು. ಎಂ.ಬಿ.ಎ. ವಿಭಾಗದ ನಿರ್ದೇಶಕ ಡಾ. ಎಂ.ಆರ್. ಸೊಲ್ಲಾಪುರ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಎಂ. ಅಜೋಯ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಮನು ಟಿ.ಯು. ವಂದಿಸಿದರು.

Leave a Comment