ಎಂಜಿನಿಯರ್ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ತುಮಕೂರು, ಸೆ. ೧೩- ದೇಶದಲ್ಲಿ ಅತಿಹೆಚ್ಚು ಎಂಜಿನಿಯರ್‍ಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯಕ್ಕೆ ಮೇಲು ಸ್ಥಾನವಿದೆ. ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ್ದರಿಂದಲೇ ರಾಜ್ಯ ಪ್ರಸ್ತುತ ಐ.ಟಿ. ಕ್ಷೇತ್ರದಲ್ಲಿ ಹೆಸರು ಮಾಡುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಎಸ್‍ಐಟಿ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಇನ್ಸಿಟ್ಯೂಟ್ ಆಫ್ ಎಂಜಿನಿಯರ್ (ಇಂಡಿಯಾ) ರಾಜ್ಯ ಘಟಕದ 9ನೇ ಯೂನಿಟ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಎಂಜಿನಿಯರ್‍ಗಳು ಹೆಚ್ಚಾದಂತೆ ಉದ್ಯೋಗಾವಕಾಶದ ಕೊರತೆ ಕಾಡುತ್ತಿದೆ. ಕಾಲೇಜಿನಿಂದ ಹೊರಬರುವ ಎಂಜಿನಿಯರ್‍ಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ವೃತ್ತಿನಿರತರು ಚಿಂತಿಸಬೇಕಿದೆ. ಎಂಜಿನಿಯರ್ ಕಾಲೇಜುಗಳ ಸೀಟುಗಳು ಇಂದು ಭರ್ತಿಯಾಗುತ್ತಿಲ್ಲ. ಕಂಡೆಕ್ಟರ್ ಉದ್ಯೋಗಕ್ಕೆ ಎಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಎಂಜಿನಿಯರಿಂಗ್ ಪಠ್ಯ ಕ್ರಮವನ್ನು ಬದಲಿಸಿ, ಇಂದಿನ ಕಾಲಕ್ಕೆ ತಕ್ಕಂತೆ ಬದಲಿಸಬೇಕಿದೆ. ಈ ನಿಟ್ಟಿನಲ್ಲಿ ದ ಇನ್ಸಿಟಿಟ್ಯೂಟ್ ಆಫ್ ಎಂಜಿನಿಯರ್ ಪ್ರಯತ್ನ ಮಾಡಲಿ. ಸ್ಟಾರ್ಟ್ ಆಪ್‌ಗಳನ್ನು ಸ್ಥಾಪಿಸುವ ಮೂಲಕ ಸ್ವಯಂ ಉದ್ಯೋಗವನ್ನು ಪಡೆಯುವತ್ತ ಎಂಜಿಯರ್‍ಗಳು ಚಿಂತಿಸಲಿ ಎಂದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೌಶಲ್ಯ ಕ್ರಾಂತಿ ಆಗುತ್ತಿದ್ದು, ವೃತ್ತಿನಿರತರು, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಎಂಜಿನಿಯರ್‍ಗಳು ಒಂದೆಡೆ ಸೇರುವ ಮೂಲಕ ದೊಡ್ಡ ಶಕ್ತಿಯನ್ನು ಸೃಷ್ಟಿಸಿದ್ದಾರೆ. ತಂತ್ರಜ್ಞಾನ ಹಾಗೂ ಪಠ್ಯಕ್ರಮದಲ್ಲಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.

ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ದೇಶದಲ್ಲಿ 800 ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕಾಲದಿಂದ ಕಾಲಕ್ಕೆ ಆಗುವ ಬದಲಾವಣೆ ಬಗ್ಗೆ ಎಂಜಿನಿಯರ್‍ಗಳಿಗೆ ತಲುಪಿಸುವ ಕೆಲಸವನ್ನು ದ ಇನ್ಸಿಟ್ಯೂಟ್ ಆಫ್ ಎಂಜಿನಿಯರ್ ಮಾಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಎತ್ತಿನಹೊಳೆ, ತುಂಗಾಭದ್ರಾ, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ತರಲಾಗುತ್ತಿದೆ. ಆದರೆ, ಪಠ್ಯಕ್ರಮದಲ್ಲಿ ಇನ್ನೂ ಹಳೆಯ ಪದ್ಧತಿಗಳೇ ಇದ್ದು, ವಿದ್ಯಾರ್ಥಿಗಳು ಹಾಗೂ ವೃತ್ತಿನಿರತರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ವೃತ್ತಿನಿರತ ಎಂಜಿನಿಯರ್‍ಗಳು ಸೇರಿಕೊಂಡಿರುವ ದ ಇನ್ಟಿಟ್ಯೂಟ್ ಆಫ್ ಎಂಜಿನಿಯರ್ ಸಂಸ್ಥೆಗೆ ಸರ್ಕಾರ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟರೆ, ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಬಹುದು. ಸಂಸ್ಥೆಗೆ ಜಾಗ ನೀಡುವಂತೆ ಸಚಿವರು, ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಎಂಜನಿಯರ್ ಪಿ.ಚೆನ್ನಪ್ಪ ನಾಯ್ಕ್, ಹೇಮಾವತಿ ನೀರಾವರಿ ನಾಲೆ ಮುಖ್ಯ ಎಂಜಿನಿಯರ್ ಶಿವಕುಮಾರ್, ಕಾರ್ಯಕ್ರಮದಲ್ಲಿ “ದ ಇನ್ಸಿಟ್ಯೂಟ್ ಆಫ್ ಎಂಜನಿಯರ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎನ್.ಚಿಕ್ಕಣ್ಣ, ತುಮಕೂರು ಘಟಕದ ಅಧ್ಯಕ್ಷರಾದ ಡಾ.ಸುರೇಶ್, ಗೌರವ ಕಾರ್ಯದರ್ಶಿಗಳಾದ ಪ್ರೊ.ಯು.ಎಸ್.ಮಲ್ಲಿಕ್, ಸದಸ್ಯರಾದ ಎಂ.ನಾಗರಾಜ್, ಆರ್. ಆನಂದಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Comment