ಎಂಎಲ್‌ಸಿ ಅವಧಿ – 11.75 ಕೋಟಿ ಅಭಿವೃದ್ಧಿ

ಕೊನೆವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯ ಸೇವೆ
ರಾಯಚೂರು.ಜೂ.30- ವಿಧಾನ ಪರಿಷತ್ ಅಧಿಕಾರಾವಧಿಯ ಆರು ವರ್ಷಗಳಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಟ್ಟು 11.75 ಕೋಟಿ ವೆಚ್ಚದಲ್ಲಿ 333 ಕಾಮಗಾರಿ ಕೈಗೊಳ್ಳಲಾಗಿದೆಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು ಹೇಳಿದರು.
ಇಂದು ಆರು ವರ್ಷದ ಅವರ ಪರಿಷತ್ ಅಧಿಕಾರಾವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15 ರಿಂದ 2019-20 ರವರೆಗೆ ವಿಧಾನ ಪರಿಷತ್ ಸದಸ್ಯ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾಮಗಾರಿ ಮತ್ತು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀ‌ಡಿದರು. ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಬಹುತೇಕವಾಗಿ ಜಿಲ್ಲೆಗೆ ನೀಡಿದ್ದು, ರಾಜ್ಯದ ವ್ಯಾಪ್ತಿಯನ್ನು ಹೊಂದಿದ್ದರಿಂದ ಕೆಲ ಜಿಲ್ಲೆಗಳಿಗೂ ಒಂದೆರಡು ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ.
ರಾಯಚೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3.69 ಕೋಟಿ ವೆಚ್ಚದಲ್ಲಿ 114 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ 2.28 ಕೋಟಿ ವೆಚ್ಚದಲ್ಲಿ 67 ಕಾಮಗಾರಿ, ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ 3.78 ಕೋಟಿ ವೆಚ್ಚದಲ್ಲಿ 126 ಕಾಮಗಾರಿ ಕೈಗೊಳ್ಳಲಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ 5 ಕಾಮಗಾರಿಗಳಿಗೆ 18 ಲಕ್ಷ, ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಾಮಗಾರಿಗಳಿಗೆ 9 ಲಕ್ಷ, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಾಮಗಾರಿಗಳಿಗೆ 7.50 ಲಕ್ಷ ನೀಡಿರುವುದಾಗಿ ಹೇಳಿದ ಅವರು, ಬಾಗಲಕೋಟೆಗೆ 10ಲಕ್ಷ, ರಾಮನಗರಕ್ಕೆ 5, ಚಿಕ್ಕಮಗಳೂರಿಗೆ 5, ತುಮಕೂರು 20, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಜಿಲ್ಲೆಗಳಿಗೆ ತಲಾ 5 ಲಕ್ಷ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡಲಾಗಿದೆ.
333 ಕಾಮಗಾರಿಗಳಲ್ಲಿ ಇಲ್ಲಿವರೆಗೂ 250 ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಇದಲ್ಲದೇ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಐಡಿಬಿಯಿಂದ 9 ಕೋಟಿ ರೂ. ಅನುದಾನದೊಂದಿಗೆ ರಸ್ತೆ ಮತ್ತಿತರ ಮೂಲಭೂತ ಸೌಕರ್ಯ ಕಾಮಗಾರಿ ಕೈಗೊಳ್ಳಲಾಗಿದೆ. ಎಪಿಎಂಸಿಗೆ 3 ಕೋಟಿ ರೂ., ಅಲ್ಪಸಂಖ್ಯಾತರ ಬಡಾವಣೆ ಅಭಿವೃದ್ಧಿಗೆ 3 ಕೋಟಿ ನೀಡಲಾಗಿದೆ.
ಶಿಕ್ಷಕರ ಭವನಕ್ಕೆ 1 ಕೋಟಿ, ಬಿಆರ್‌ಬಿ ವೃತ್ತದ ಬಳಿಯಿರುವ ಮುಕ್ತಿಧಾಮದಲ್ಲಿ ಚಿತಾಗಾರಕ್ಕೆ 2 ಕೋಟಿ ಅನುದಾನ ನೀಡಲಾಗಿದ್ದು, ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕೇಂದ್ರಕ್ಕಾಗಿ 15 ಕೋಟಿ ರೂ. ಯೋಜನೆ ಮುಂಜೂರಿ ಮಾಡಲಾಗಿದೆ. ಈ ಯೋಜನೆ ಟೆಂಡರ್ ಹಂತದಲ್ಲಿದೆ. ಮಹಿಳಾ ಸಮಾಜ ಅಭಿವೃದ್ಧಿಗೆ 1.50 ಕೋಟಿ ಹಾಗೂ ಬಿಆರ್‌ಜಿಎಫ್ ಯೋಜನೆಯಡಿ ಕರ್ನಾಟಕ ಸಂಘದಲ್ಲಿ ಭವನ ನಿರ್ಮಾಣಕ್ಕೆ 1.20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
1969 ರಿಂದ ತಾವು ರಾಜಕೀಯದಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ. ಪಕ್ಷ ನನಗೆ ಕಾಲ ಕಾಲಕ್ಕೆ ನೀಡಿದ ಜವಾಬ್ದಾರಿಯನ್ನು ನಾನು ಅಷ್ಟೆ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. 1985 ರಲ್ಲಿ ಮಾನ್ವಿಯಿಂದ ನನಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದೆ. ನಂತರ ಮತ್ತೇ 1994 ರಲ್ಲಿ ಮಾನ್ವಿಯಿಂದ ಟಿಕೆಟ್ ನೀಡಲಾಯಿತು. ಎರಡು ಅವಧಿಗೆ ಜಯಗಳಿಸಿ, ಶಾಸಕನಾಗಿ ಕೆಲಸ ನಿರ್ವಹಿಸಿದ್ದೇನೆ.
ವೀರಪ್ಪ ಮೊಯ್ಲಿ ಅವರ ಅಧಿಕಾರಾವಧಿಯಲ್ಲಿ ಕಾಡಾಧ್ಯಕ್ಷರಾಗಿ ನಂತರ ಹೆಚ್‌ಕೆ‌ಬಿ ಅಧ್ಯಕ್ಷರಾಗಿ, ಧರ್ಮಸಿಂಗ್ ನೇತೃತ್ವದ ಅಧಿಕಾರಾವಧಿಯಲ್ಲಿ ರಾಜಕೀಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ವಿಧಾನ ಪರಿಷತ್ ಸದಸ್ಯನಾಗಿ ಆರು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ್ದೇನೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ, ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಕೊನೆಯುಸಿರಿರುವವರೆಗೂ ನಾನು ಸೇವೆ ಮಾಡುತ್ತೇನೆಂದು ಹೇಳಿದ ಅವರು, ರಾಯಚೂರು ನಗರ ವಿಧಾನಸಭಾ ಸೇರಿದಂತೆ ರಾಜ್ಯದ ಮತ್ತು ಎಐಸಿಸಿ ಕಾರ್ಯದರ್ಶಿಯಾಗಿದ್ದರಿಂದ ಇನ್ನಿತರೆಡೆ ಎಲ್ಲಿಯಾದರೂ, ಸ್ಪರ್ಧಿಸಲು ಅವಕಾಶ ನೀಡಿದರೇ ನಾನು ಸ್ಪರ್ಧಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ.ನಾಯಕ, ಶಾಸಕ ದದ್ದಲ ಬಸವನಗೌಡ, ಜಿ.ಬಸವರಾಜ ರೆಡ್ಡಿ, ಜಯಣ್ಣ, ರಾಮಣ್ಣ ಇರಬಗೇರಾ, ರುದ್ರಪ್ಪ ಅಂಗಡಿ, ಅಬ್ದುಲ್ ಕರೀಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share

Leave a Comment