ಋಣಮುಕ್ತ ಸಾಲ ಮನ್ನಾ ಕಾಯ್ದೆ ಶೀಘ್ರ ಜಾರಿ

ಕೊರಟಗೆರೆ ಸೆ. ೭- ರೈತರು ಖಾಸಗಿ ವ್ಯಕ್ತಿಗಳಲ್ಲಿ ಮಾಡಿರುವ ಕೈ ಸಾಲವನ್ನು ಮುಕ್ತಗೊಳಿಸಲು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವಧಿಯಲ್ಲಿ ಜಾರಿಗೆ ತಂದಿದ್ದ ಋಣಮುಕ್ತ ಸಾಲ ಮನ್ನಾ ಕಾಯ್ದೆಗೆ ಶೀಘ್ರದಲ್ಲಿ ಅಧಿಸೂಚನೆ ಜಾರಿಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತುಮಕೂರು ಮಲ್ಲಸಂದ್ರ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಏರ್ಪಡಿಸಿದ್ದ ತಾಲ್ಲೂಕಿನ 14 ಗ್ರಾಮಗಳಾದ ಹೊಳವನಹಳ್ಳಿ, ಎಂ. ಗೊಲ್ಲಹಳ್ಳಿ, ತಿಮ್ಮಸಂದ್ರ, ನರಸಾಪುರ, ಚಿಕ್ಕದೊಡ್ಡವಾಡಿ, ಬೆಂಡೊಣೆ, ಕುರಂಕೋಟೆ ಹಾಗೂ ಹೊಸಪೇಟೆ, ವಜ್ಜನಕುರಿಕೆ, ಸಂಕೇನಹಳ್ಳಿ, ಗೌರಗಾನಹಳ್ಳಿ, ಗೌಜಗಲ್ಲು, ಕಬ್ಬಿಗೆರೆ ಹಂಚಿಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ರೈತರ ಕಷ್ಟದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.

ಮಳೆಯ ಆಶ್ರಯ ರಾಜ್ಯವಾಗಿರುವ ಕರ್ನಾಟಕ 9 ವಿವಿಧ ಹವಾಮಾನ ಪ್ರದೇಶಗಳನ್ನು ಹೊಂದಿದ್ದು, ಕೆಲ ಜಿಲ್ಲೆಗಳಲ್ಲಿ ರೈತರ ಬದುಕು ಕಷ್ಟಕರವಾಗಿದೆ. ವಲಸೆ ಹೋಗುವುದರೊಂದಿಗೆ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದಿದ್ದು, ಕಳೆದ ವರ್ಷ 3 ಸಾವಿರಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಕಷ್ಟ ಅರಿತು ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡಿದ್ದು, ಈ ಬಾರಿಯೂ ಸಮ್ಮಿಶ್ರ ಸರ್ಕಾರದಲ್ಲೂ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಸಹಕಾರ ಸಂಘಗಳ ರೈತರ 42 ಸಾವಿರ ಕೋಟಿ ಸಾಲ ಮನ್ನಾ ಮಾಡಲಿದೆ ಎಂದರು.

ರೈತರ ಶ್ರಮದ ಹೈನುಗಾರಿಕೆಯಿಂದ ವಿಶ್ವದಲ್ಲಿ ಶೇ. 17 ರಷ್ಟು ಹಾಲು ಉತ್ಪಾದಿಸುವ ನಿಟ್ಟಿನಲ್ಲಿ ಭಾರತ ದೇಶ ಹೆಚ್ಚು ಹಾಲು ಉತ್ಪಾದನಾ ದೇಶವಾಗಿ ಕ್ಷೀರಕಾಂತ್ರಿಗೆ ಹೆಸರಾಗಿದೆ ಎಂದರು.

ಮಳೆಯಿಲ್ಲದೆ ಬರದ ಛಾಯೆ ಹೊಂದಿರುವ ಒಣ ಪ್ರದೇಶಗಳಲ್ಲಿ ಹೈನುಗಾರಿಕೆ ರೈತರನ್ನು ಆರ್ಥಿಕವಾಗಿ ಉತ್ತಮ ಪಡಿಸುವುದರೊಂದಿಗೆ ರೈತರ ಜೀವನ ಹಸನಾಗಲು ಹೈನುಗಾರಿಗೆ ಉತ್ತಮ ದಾರಿಯಿದ್ದು, ರಾಜ್ಯದಲ್ಲಿ ಪ್ರತಿನಿತ್ಯ 82 ಲೀಟರ್ ಹಾಲು ಉತ್ಪಾದನೆಯಾಗಲಿದೆ ಎಂದರು.

ಒಣ ಭೂಮಿ ಪ್ರದೇಶಗಳಲ್ಲಿನ ಸಾರ್ವಜನಿಕರ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ನೀರು ಹರಿಸುವ ಶಾಶ್ವತ ನೀರಾವರಿ ಯೋಜನೆಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಹೆಚ್ಚು ಒತ್ತು ನೀಡಿದಂತೆ ಈ ಬಾರಿಯೂ ಸಮ್ಮಿಶ್ರ ಸರ್ಕಾರದಲ್ಲೂ ನೀರಾವರಿ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಿ ಯೋಜನೆ ಪ್ರಗತಿಯಲ್ಲಿದ್ದು, ಇದರಿಂದ ರೈತರ 4 ಲಕ್ಷ ಎಕರೆ ಜಮೀನಿಗೆ ನೀರು ಹರಿಯುವುದರೊಂದಿಗೆ ಅಂತರ್ಜಲ ವೃದ್ಧಿಯಾಗಲಿದ್ದು, ಎತ್ತಿನಹೊಳೆ ನೀರಾವರಿ ಯೋಜನೆಯೊಂದಿಗೆ ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಭದ್ರಮೇಲ್ದಂಡೆ ಯೋಜನೆಗೂ ಚಾಲನೆ ನೀಡುವುದರೊಂದಿಗೆ ಸಮ್ಮಿಶ್ರ ಸರ್ಕಾರದಲ್ಲೂ ರೈತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಸಂಸದ ಮುದ್ದಹನುಮೇಗೌಡ ಮಾತನಾಡಿ, ರೈತರ ಕಷ್ಟಕ್ಕೆ ಸರಿಯಾದ ಫಲ ದೊರೆಯುತ್ತಿಲ್ಲ. ಆರ್ಥಿಕ ಸಂಕಷ್ಟದಿಂದ ಪಾರಾಗಲು ರೈತರಿಗೆ ಹೈನುಗಾರಿಕೆಯ ಕ್ಷೀರಕ್ರಾಂತಿಯಿಂದ ಸಾಧ್ಯವಾಗಿದ್ದು, 2022 ರ ವೇಳೆಗೆ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಆದೇಶ ಹೊರ ಬರಲಿದ್ದು, ಈ ಆದೇಶ ಸಫಲವಾಗುವುದಿಲ್ಲ ಎಂದರು.

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಆಶೀರ್ವಾದ ನೀಡಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಹಾಗೂ ರಾಜ್ಯ ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆದಿರುವ ಡಾ. ಜಿ. ಪರಮೇಶ್ವರ್ ರವರು ರೈತರ ಕಷ್ಟಕ್ಕೆ ಸ್ಪಂದಿಸಿ ಈ ಭಾಗದ ಬರಡು ಪ್ರದೇಶಕ್ಕೆ ಶಾಶ್ವತ ನೀರಾವರಿ ಯೋಜನೆ ಅವರ ಅವಧಿಯಲ್ಲೆ ಜಾರಿಗೊಳಿಸಬೇಕು ಹಾಗೂ ರೈತರಿಗೆ ಬ್ಯಾಂಕ್‍ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವ ಮೂಲಕ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಕರ್ನಾಟಕ ಹಾಲು ಮಹಾ ಮಂಡಲಿ ನಿರ್ದೇಶಕ ಚಂದ್ರಶೇಖರ್, ಎಂ.ಪಿ. ವಿಜಯ ಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ. ಮುನೇಗೌಡ, ಜಿ.ಪಂ. ಸದಸ್ಯ ನಾರಾಯಣಮೂರ್ತಿ, ಪ್ರೇಮಾ, ಮಾಜಿ ಸದಸ್ಯ ಪ್ರಸನ್ನಕುಮಾರ್, ತಾ.ಪಂ.ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಗ್ರಾ,ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಹನುಮಾನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತಹಶೀಲ್ದಾರ್ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮೈಲಾರಪ್ಪ, ಕೆಪಿಸಿಸಿ ಕಾರ್ಯದರ್ಶಿ ಅನಿಲ್‍ಕುಮಾರ್‍ಪಾಟೀಲ್, ಪ.ಪಂ. ಸದಸ್ಯ ಎ.ಡಿ. ಬಲರಾಮಯ್ಯ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.

Leave a Comment