ಊರ್ಮಿಳೆಯನ್ನು ವರಿಸಿದ ಶಿವ !

ಕಲಬುರಗಿ,ಜೂ.19-ಅಲ್ಲೊಂದು ಸಡಗರ, ಸಂಭ್ರಮ, ಹೊಸ ಜೀವನಕ್ಕೆ ಅಡಿ ಇಟ್ಟ ನವ ದಂಪತಿಗಳ ಮೊಗದಲ್ಲಿ ಮಂದಹಾಸ. ಹೊಸ ಬಾಳಿನ ಹೊಸಿತಿಲಲ್ಲಿ ಕಾಲಿಟ್ಟ ನವಜೋಡಿಗೆ ” ನಿಮ್ಮ ದಾಂಪತ್ಯ ಜೀವನ ಸುಖ, ಸಂತೋಷಮಯವಾಗಿರಲಿ” ಎಂಬ ಶುಭ ಹಾರೈಕೆಯ ಸುರಿಮಳೆ. ಇಂತಹದೊಂದು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದದ್ದು, ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯ.
2013ರ ಮಾರ್ಚ 30 ರಂದು ಮಹಿಳಾ ನಿಲಯಕ್ಕೆ ಸೇರಿದ ಅನಾಥ ಬಾಲಕಿ ಊರ್ಮಿಳಾ ತಂದೆ ಗೋಗೆಪ್ಪ (23) ಮತ್ತು ನಗರದ ಶಿವಲಿಂಗಯ್ಯ ವೀರುಪಾಕ್ಷಯ್ಯ ಮಠಪತಿ (27) ಅವರ ಮದುವೆ ಮಹಿಳಾ ನಿಲಯದಲ್ಲಿಂದು ಶಾಸ್ತ್ರೋಕ್ತವಾಗಿ ನಡೆಯಿತು.
ಅಫಜಲಪುರ ತಾಲ್ಲೂಕಿನ ಘತ್ತರಗಾ ಗ್ರಾಮದವರಾದ ಊರ್ಮಿಳಾ ಬಿ.ಎ.ವರೆಗೆ ಓದಿದ್ದು, ಎಸ್.ಎಸ್.ಎಲ್.ಸಿಯವರೆಗೆ ಓದಿದ, ಶಿವಲಿಂಗ ಬುಕ್ ಡಿಪೋದಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಶಿವಲಿಂಗಯ್ಯ ಮಠಪತಿ ಅವರನ್ನು ವರಿಸಿದರು. ವಾರ್ಷಿಕ 1.50 ಲಕ್ಷ ಆದಾಯವಿರುವ ಶಿವಲಿಂಗಯ್ಯ ಅವರು ಊರ್ಮಿಳಾ ಅವರ ಕೈ ಹಿಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಸ್.ಆರ್.ಮಾಣಿಕ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಪ್ರಗತಿಪರ ಚಿಂತಕಿ ಕೆ.ನೀಲಾ ಸೇರಿದಂತೆ ಶಿವಲಿಂಗಯ್ಯ ಮಠಪತಿ ಅವರ ಕುಟುಂಬವರ್ಗದವರು, ಸಂಬಂಧಿಕರು ಮತ್ತು ಅಧಿಕಾರಿಗಳು ಮದುವೆಗೆ ಸಾಕ್ಷಿಯಾದರು.
ಹೊಸ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳನ್ನು ಅಧಿಕಾರಿಗಳು, ಮಹಿಳಾ ನಿಲಯದ ಸಿಬ್ಬಂದಿಗಳು ಶುಭ ಹಾರೈಸಿದರು. ಮದುವೆಗೆ ಆಗಮಿಸಿದ್ದ ಅಧಿಕಾರಿಗಳು, ಬಂಧುಗಳು ಸವಿ ಭೋಜನ ಸವಿದರು.
@12bc = ಇದು 15ನೇ ಮದುವೆ
ಮಹಿಳಾ ನಿಲಯದಲ್ಲಿ ಇಂದು ನಡೆದ ಊರ್ಮಿಳಾ ಶಿವಲಿಂಗಯ್ಯ ಅವರ ಮದುವೆ 15ನೇಯದು. ಇದಕ್ಕೂ ಮುನ್ನ ಮಹಿಳಾ ನಿಲಯದ 14 ಜನರಿಗೆ ಕಂಕಣಭಾಗ್ಯ ಕಲ್ಪಿಸಲಾಗಿದೆ. 2008 ರಲ್ಲಿ 18 ವರ್ಷದ ಲಲಿತಾ ಲಲಿತಾ ಕಲಬುರಗಿಯ ಪ್ರಸನ್ನ ಅವರನ್ನು, ಪ್ರೇಮಾ ಅವರು ಹುಮನಾಬಾದಿನ ಪುಟ್ಟರಾಜ ಶೀಲಮೂರ್ತಿ ಅವರನ್ನು, 2010 ರಲ್ಲಿ 18 ವರ್ಷದ ಆಶಾ ವಿಜಯಪುರದ ವಿನಯ ಜೋಶಿ ಅವರನ್ನು, 2011 ರಲ್ಲಿ 19 ವರ್ಷದ ಗೀತಾ ವಿಜಯಪುರದ ಶ್ರೀಧರ ಜೋಶಿ ಅವರನ್ನು, 21 ವರ್ಷದ ಕವಿತಾ ನಾರಾಯಣಪುರದ ಸುಭಾಸ ಕುಲಕರ್ಣಿ ಅವರನ್ನು, 2012 ರಲ್ಲಿ 19 ವರ್ಷದ ಪ್ರತಿಮಾ ಬಾಗಲಕೋಟೆಯ ಪ್ರಸನ್ನ ಕಾತರಕಿ ಅವರನ್ನು, 19 ವರ್ಷದ ಶಾರದಾ ಬಾಗಲಕೋಟೆಯ ವಾದಿರಾಜ ಗಿಂಡಿ ಅವರನ್ನು, 2013 ರಲ್ಲಿ 23 ವರ್ಷದ ಸಾವಿತ್ರಿ ಸುರಪುರದ ಪ್ರಸನ್ನ ಕುಲಕರ್ಣಿ ಅವರನ್ನು, 2015 ರಲ್ಲಿ 18 ವರ್ಷದ ವಿಜಯಲಕ್ಷ್ಮಿ ಜೇವರ್ಗಿಯ ದತ್ತುರಾವ ಕುಲಕರ್ಣಿ ಅವರನ್ನು, 2014 ರಲ್ಲಿ ರಾಣಿ ಬೆಂಗಳೂರಿನ ಬೆಂಗಳೂರಿನ ಶಂಕರ ಕುಲಕರ್ಣಿ ಅವರನ್ನು, ಧಾನಮ್ಮ ಆಲಮೇಲದ ಗುರುರಾಜ ಅವರನ್ನು, 2015 ರಲ್ಲಿ 25 ವರ್ಷದ ಜ್ಯೋತಿ ಕಲಬುರಗಿಯ ಗಿರೀಶಕುಮಾರ ಅವರನ್ನು, 2016 ರಲ್ಲಿ ಸಿದ್ದಮ್ಮಾ ಯಾದಗಿರಿಯ ಭೀಮಾಶಂಕರ ಅವರನ್ನು ಹಾಗೂ ಯಲ್ಲಮ್ಮ ಅವರು ವಿಜಯಪುರದ ದತ್ತಾತ್ರೇಯ ಅವರನ್ನು ವಿವಾಹ ಆಗಿದ್ದಾರೆ.

Leave a Comment