ಊರುಕೆರೆ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಚಾಲನೆ

ತುಮಕೂರು, ಅ. ೧೧- ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಊರುಕೆರೆ ಗ್ರಾಮದಲ್ಲಿ ಹಲವು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಸಿ. ಗೌರಿಶಂಕರ್ ಗುದ್ದಲಿ ಪೂಜೆ ನೇರವೇರಿಸಿದರು.

ತಾಲ್ಲೂಕಿನ ಊರುಕೆರೆ ಗ್ರಾಮದ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಹೆಬ್ಬಾಕ, ಮುದಿಗೆರೆ, ಬಳ್ಳಾಪುರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆ ಮತ್ತು ರಂಗನಪಾಳ್ಯ, ಕರೇಕಲ್ ಪಾಳ್ಯ, ಪಾಲಿಹಟ್ಟಿ, ಮಲ್ಲೇನಹಳ್ಳಿ ಗೊಲ್ಲರಹಟ್ಟಿ, ಚನ್ನೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆ ಹಾಗೂ ಬುಗುಡನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಮತ್ತು ಬೆಳ್ಳಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.

ಊರುಕೆರೆ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿ ಹಲವು ತಿಂಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಶಾಸಕರು ಕ್ಷೇತ್ರ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಶಾಸಕರ ಗಮನ ಸೆಳೆದಿದ್ದರು. ಅಂದೇ ಕಾರ್ಯಪ್ರವೃತ್ತರಾದ ಶಾಸಕರು ಈ ಬಗ್ಗೆ ಮಾಹಿತಿ ನೀಡುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದಾಗ ಅವರು ಈ ಬಗ್ಗೆ ಸೂಕ್ತ ದಾಖಲೆ ನೀಡುವಲ್ಲಿ ವಿಫಲರಾದ ಹಿನ್ನೆಲೆ ಅಧಿಕಾರಿಗಳಿಗೆ ಶಾಸಕರು ಸ್ಥಳದಲ್ಲೇ ಬೇವರಿಳಿಸಿದ್ದರು.

ಶಾಸಕರು ಎಚ್ಚರಿಕೆ ನೀಡಿದ ಪರಿಣಾಮ ಊರುಕೆರೆ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಫಲಶೃತಿ ದೊರೆತ್ತಿದ್ದು, ಶಾಸಕರೇ ಖುದ್ದು ಗ್ರಾ.ಪಂ. ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಸಾರ್ವಜನಿಕರ ಗಮನ ಸೆಳೆದರು.

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಲೋಪವಾಗಬಾರದು ಹಾಗೂ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸ್ಥಳದಲ್ಲೇ ಇದ್ದ ಗುತ್ತಿಗೆದಾರನಿಗೆ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಎಚ್ಚರಿಸಿದರು.

ಸ್ವಾಂದೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ  ಸೈಕಲ್ ವಿತರಣೆ ಮಾಡಿ ಮಾತನಾಡಿದ ಶಾಸಕರು, ಮುಂದಿನ 5 ವರ್ಷದೊಳಗೆ ಗ್ರಾಮಾಂತರ ಕ್ಷೇತ್ರದಲ್ಲಿ ವರ್ಷಕ್ಕೆ 5 ರಂತೆ 25 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಹೈಟೆಕ್ ಶಾಲೆಗಳಾಗಿ ಅಭಿವೃದ್ದಿಪಡಿಸುವ ಗುರಿ ಹೊಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇಡೀ ಜಿಲ್ಲೆಯಲ್ಲಿಯೇ ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಇಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗೆ ಸರಿ ಸಾಟಿಯಾಗಿ ಫಲಿತಾಂಶ ನೀಡುತ್ತಿದ್ದಾರೆ. ಈ ಫಲಿತಾಂಶ ಇನ್ನಷ್ಟು ದ್ವಿಗುಣವಾಗಬೇಕು. ಅದಕ್ಕಾಗಿ ಅಗತ್ಯವಾದ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಾನು ಸದಾ ಸಿದ್ದ. ಶಾಸಕರ ಅನುದಾನದಲ್ಲಿ ಗ್ರಾಮದ ಸರ್ಕಾರಿ ಶಾಲೆಗೆ ಶೌಚಾಲಯ ಸೌಲಭ್ಯ ಒದಗಿಸಲು ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಬೆಳ್ಳಾವಿ ಹೋಬಳಿ ಬಳ್ಳಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಳ್ಳಾವಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಆ ಭಾಗದ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಬೆಳ್ಳಾವಿ ಭಾಗದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಹಾದು ಹೋಗುತ್ತಿದ್ದು, ಈ ಯೋಜನೆಯಲ್ಲಿ ಬೆಳ್ಳಾವಿ ಹೋಬಳಿಯ 8 ರಿಂದ 10 ಕೆರೆಗಳಿಗೆ ನೀರು ಹರಿಸುವುದು ನಿಶ್ಚಿತ, ನನ್ನ ಹೋರಾಟಕ್ಕೆ ನಿಮ್ಮ ಬೆಂಬಲವಿರಲಿ, ನಿಮ್ಮ ಜೊತೆ ನಾನು ಇದ್ದೇನೆ ಎಂದು ಭರವಸೆ ನೀಡಿದರು.

ಡಿಸೆಂಬರ್ ತಿಂಗಳೊಳಗೆ ಗ್ರಾಮಾಂತರ ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 150 ಕೋಟಿ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಅನುದಾನ ಬಿಡುಗಡೆಯಾದರೆ ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳ ಪ್ರಗತಿ ಚುರುಕುಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತ್‍ಕುಮಾರ್, ಜೆಡಿಎಸ್ ಮುಖಂಡರಾದ ಹಿರೇಹಳ್ಳಿ ಮಹೇಶ್, ಕೆಂಪರಾಜು, ಹೆಗ್ಗೆರೆ ಆಜಮ್, ಬೋವಿಪಾಳ್ಯ ಉಮೇಶ್, ಊರುಕೆರೆ ಶ್ರೀನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Leave a Comment