ಉ.ಕ.ದಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ, ಅ 6: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಜನರು ಮತ್ತೆ ಪರದಾಡುತ್ತಿದ್ದು, ಜನಜೀವನ ಮತ್ತೆ ಅಸ್ಥವ್ಯಸ್ತಗೊಂಡಿದೆ.
ನಿನ್ನೆ ಸುರಿದ ಧಾರಾಕಾರ ಮಳೆಗೆ ಕೆಲ ಕಡೆಗಳಲ್ಲಿ ಮತ್ತೆ ಮನೆಗಳ ಗೋಡೆಗಳು ಕುಸಿದಿದ್ದು, ಜನರು ಮಳೆ ಭೀತಿಯಿಂದ ಮತ್ತೆ ಪರಿತಪಿಸುವ ವಾತಾವರಣ ನಿರ್ಮಾಣವಾಗಿದೆ. ಧಾರವಾಡ, ಬಾಗಲಕೋಟ, ಹಾವೇರಿ, ಗದಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳೆ ರಭಸವಾಗಿ ಸುರಿದಿದ್ದು, ರೈತರು, ಸಾರ್ವಜನಿಕರು ಮತ್ತೆ ಪ್ರಾಣಭೀತಿಯನ್ನು ಎದುರಿಸುವಂತಾಗಿದೆ.
ಹಾವೇರಿ: ನಿನ್ನೆಯಿಂದ ಸುರಿಯುತ್ತಿರುವ  ಧಾರಾಕಾರ ಮಳೆಯಿಂದಾಗಿ ನಗರದ ರಸ್ತೆಗಳು ನದಿಯಂತಾಗಿದ್ದು, ಸಂಚಾರ ವ್ಯವಸ್ಥೆ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ.
ನಗರದ ಎಂ.ಜಿ.ರಸ್ತೆ ಅಕ್ಕಪಕ್ಕದ ಕಾಲೋನಿ,ಸರ್ಕಾರಿ ಕಛೇರಿಗಳಿಗೆ ನೀರು ನುಗಿದ್ದು, ಸುಮಾರು ಒಂದು ಕಿಮೀ ದೂರದವರೆಗೂ ನೀರು ಹರಿಯುತ್ತಿದೆ.
ಪೋಲಿಸ್ ಕ್ವಾರ್ಟರ್ಸ್, ಜಿಲ್ಲಾ ನ್ಯಾಯಾಲಯ, ಪ್ರವಾಸಿ ಮಂದಿರ ಹಾಗೂ ಬಸ್ ನಿಲ್ದಾಣಗಳಿಗೂ ಕೂಡ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ನೀರು ಖಾಲಿಯಾಗುವರೆಗೂ ಎಂ.ಜಿ.ರಸ್ತೆ ಬಂದ್ ಆಗುವ ಸಾಧ್ಯತೆಗಳಿದ್ದು, ಬಸ್ ನಿಲ್ದಾಣಕ್ಕೆ ನೀರು‌ ನುಗ್ಗಿರುವುದರಿಂದ ಸಾರ್ವಜನಿಕ ಸಂಚಾರದ‌ ಮೇಲೂ ಪರಿಣಾಮ ಬೀರಿದೆ.ಅಲ್ಲದೇ ರಸ್ತೆ ಅಕ್ಕಪಕ್ಕದ ಹೋಟೆಲ್‌,ಖಾಸಗಿ ಆಸ್ಪತ್ರೆ ಬಂದ್ ಆಗಿದ್ದು, ಪ್ರವಾಹದಂತೆ ಹರಿಯುತ್ತಿರೋ ನೀರಿನಿಂದ ಜನರು ಭಯಭೀತರಾಗಿದ್ದಾರೆ.
ಧಾರವಾಡ
ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.ಅಲ್ಲದೇ ಅನಿರೀಕ್ಷಿತ ಮಳೆಯಿಂದಾಗಿ ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಪ್ರಮಾಣದ ಹೆಚ್ಚಳದಿಂದಾಗಿ ಬೆಣ್ಣೆ ಹಳ್ಳದಿಂದ ಪ್ರವಾಹ ಭೀತಿ ಕೂಡ ಉಂಟಾಗಿದ್ದು, ರೈತರು ತಮ್ಮ ಹೊಲದಲ್ಲಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಅಲ್ಲದೇ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತನ ಹೊಟ್ಟೆ ಮೇಲೆ ಬರೆ ಎಳೆದಿದೆ.
ಕುಂದಗೋಳ ತಾಲೂಕಿನ ಕಮಡೊಳ್ಳಿ-ಶಿರೂರ್ ಗ್ರಾಮಗಳ ನಡುವೆ ಇರುವ ಕೀರು ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಬೆಣ್ಣೆ ಹಳ್ಳದ ಪಕ್ಕದಲ್ಲಿನ ಹಲವು ಜಮೀನುಗಳಿಗೆ ನುಗ್ಗಿದ ನೀರು ಮತ್ತೊಮ್ಮೆ ಜನರನ್ನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸಲಿದೆ.

ಬಾಗಲಕೋಟ
ಬಾಗಲಕೋಟ ಜಿಲ್ಲೆಯಲ್ಲಿಯೂ ನಿನ್ನೆ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವಾರು ಮನೆಗಳ ಗೋಡೆಗಳು ಕುಸಿದು ಜನರು ಮತ್ತೆ ಪ್ರಾಣಭೀತಿಯನ್ನು ಎದುರಿಸುವಂತಾಗಿದೆ.
ಈ ಹಿಂದೆ ನೆರೆಯಿಂದಾಗಿ ಅಪಾರ ಹಾನಿ ಸಂಭವಿಸಿದ ಸ್ಥಳದಲ್ಲಿಯೇ ಮತ್ತೆ ಭೀಕರ ಮಳೆ ಸಂಭವಿಸಿದ್ದು, ಜನರು ಮತ್ತೆ ಪ್ರವಾಹ ಬರಬಹುದೇನೋ ಎಂಬಂತಹ ಆತಂಕದ ಸ್ಥಿತಿಯಲ್ಲಿದ್ದಾರೆ.

Leave a Comment