ಉರಿ ಬಿಸಿಲಿಗೆ ಜನ ತತ್ತರ

 

ಕಲಬುರಗಿ,ಮೇ.23-ಸೂರ್ಯನಗರಿ ಕಲಬುರಗಿಯಲ್ಲಿ ಬಿಸಿಲ ತಾಪ ಹೆಚ್ಚಾಗಿದ್ದು, ಶುಕ್ರವಾರ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸುಡು ಬಿಸಿಲು, ಬಿಸಿಗಾಳಿಯಿಂದ ಜನ ಬಸವಳಿದು ಹೋಗುವಂತಾಗಿದೆ.

ಶುಕ್ರವಾರ ಗರಿಷ್ಠ ತಾಪಮಾನ 43.1, ಕನಿಷ್ಠ 27.7 ‌‌ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಗರಿಷ್ಠ ತಾಪಮಾನದಲ್ಲಿ 2.8, ಕನಿಷ್ಠ ತಾಪಮಾನದಲ್ಲಿ 2.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಕಳೆದೆರಡು ದಿನಗಳಿಂದ ಅಂದರೆ, ಗುರುವಾರ 42.6, ಶುಕ್ರವಾರ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ  ದಾಖಲಾಗಿದ್ದು, ಸುಡು ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ.

ಒಂದೆಡೆ ಕೊರೊನಾ ಭೀತಿ, ಇನ್ನೊಂದೆಡೆ ಬಿಸಿಲತಾಪದಿಂದಾಗಿ ಜನರ ಓಡಾಟ ವಿರಳವಾಗಿದೆ. ಬಿಸಿಲಿನಿಂದಾಗಿ ಹಗಲು ಕೆಂಡದಂತೆ ಕಾಯುವ ಭೂಮಿ, ರಾತ್ರಿ ವೇಳೆ ಬೀಸುವ ಬಿಸಿ ಗಾಳಿ ಜನರ ನಿದ್ದೆಗೆಡಿಸುತ್ತಿದೆ.

ಇನ್ನು ರಾಯಚೂರಿನಲ್ಲಿ ಗರಿಷ್ಠ ತಾಪಮಾನ 42.2, ಕನಿಷ್ಠ ತಾಪಮಾನ 27.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗರಿಷ್ಠ ತಾಪಮಾನ ಕಳೆದ ವರ್ಷಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 1.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಾರವಾರದಲ್ಲಿ ಕನಿಷ್ಠ ತಾಪಮಾನ 28.2 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಶಿರಾಲಿಯಲ್ಲಿ 27.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25.6, ಕನಿಷ್ಠ 19.3, ಚಿಕ್ಕಮಗಳೂರಿನಲ್ಲಿ ಗರಿಷ್ಠ ತಾಪಮಾನ 28.0, ಕನಿಷ್ಠ ತಾಪಮಾನ 20.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Leave a Comment