ಉಪ-ಸಮರ ಸಿದ್ದುಗೆ ದೊರೆಸ್ವಾಮಿ ಕಿವಿ ಮಾತು

ಬೆಂಗಳೂರು, ಸೆ ೨೨- ಮುಂದಿನ ತಿಂಗಳ ಅಕ್ಟೋಬರ್ 21 ರಂದು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಹೆಚ್.ಎಸ್. ದೊರೆಸ್ವಾಮಿ ಅವರು ಆಗ್ರಹಪಡಿಸಿದ್ದಾರೆ.
ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ ವರ್ತಮಾನದ ಇತಿಹಾಸ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಧಾನಿ ಮೋದಿಯೇ ಬರಲಿ, ರಾಷ್ಟ್ರೀಯ ಅಮಿತ್ ಷಾ ಅವರೇ ಬರಲಿ ಎಲ್ಲವನ್ನು ಜೀರ್ಣಿಸಿಕೊಂಡು ಅನರ್ಹ ಶಾಸಕರ ಕ್ಷೇತ್ರಗಳನ್ನು ಗೆದ್ದು ಕೊಳ್ಳುವಂತೆ ಹೇಳಿದರು.
ಮತ್ತೊಂದು ಅವಕಾಶದಲ್ಲಿ ಹೈ ಕಮಾಂಡ್ ನಮಗೆ ಮುಖ್ಯಮಂತ್ರಿಯಾಗಿ ಮಾಡಿದರೇ ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸಬೇಡಿ, ಈಗಾಗಲೇ ಮುಖ್ಯಮಂತ್ರಿಯಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ, ಮುಂದೆಯೂ ಮುಖ್ಯಮಂತ್ರಿಯಾಗಿ ಇನ್ನಷ್ಟು ಸುಧಾರಣೆಗಳನ್ನು ತನ್ನಿ ಎಂದು ಸಲಹೆ ನೀಡಿದರು.
ಅನರ್ಹ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್.ಎಸ್. ದೊರೆಸ್ವಾಮಿ ಅವರು ರಮೇಶ್ ಕುಮಾರ್ ಅವರು ವಿಧಾನ ಸಭಾಧ್ಯಕ್ಷ ರಾಗಿದ್ದ ಅವಧಿಯಲ್ಲಿ ಈ ಶಾಸಕರನ್ನು ಅನರ್ಹ ಗೊಳಿಸುವ ಮೂಲಕ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರನ್ನು ಬಲಿ ಹಾಕಿ ತಮ್ಮ ದಿಟ್ಟತನ್ನವನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ಪಕ್ಷದವರನ್ನು ಕಂಡರೆ ಮತ್ತೊಂದು ಪಕ್ಷದವರಿಗೆ ಆಗುವುದಿಲ್ಲ. ಇಂತಹ ಶಾಸಕರನ್ನಿಟ್ಟು ಕೊಂಡು ಏನು ಮಾಡುವುದಕ್ಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಶಾಸಕ ಜರ್ನಾಧನ ರೆಡ್ಡಿ ಅವರಿಗೆ ಸಿದ್ದರಾಮಯ್ಯ ಅವರು ಸರಿಯಾದ ಪಾಠವನ್ನೇ ಕಲಿಸಿದರು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟುವಾದ ಮಾತುಗಳಿಂದಲ್ಲೇ ತರಾಟೆಗೆ ತೆಗೆದುಕೊಂಡ ದೊರೆಸ್ವಾಮಿ ಅವರು ರಾಜ್ಯದಲ್ಲಿ ನೆರೆ ಹಾವಳಿ ಬಂದು ಜನ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಪ್ರಧಾನಿ ಮೋದಿ ಅವರು ಏಕೆ ಸುಮ್ಮನಿದ್ದಾರೆ. ಅವರಿಗೆ ಅಮೆರಿಕಾ ಪ್ರವಾಸಕ್ಕೆ ಹೋಗುವುದಕ್ಕೆ ಆಗುತ್ತದೆ. ಆದರೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ಆಗುವುದಿಲ್ಲವೇ ಎಂದು ಆರೋಪಿಸಿದರು.
ನೆರೆ ಸಂತ್ರಸ್ತರ ವಿಚಾರದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯವನ್ನು ಕಡೆಗಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿ ಪಕ್ಷಗಳು ದೆಹಲಿಗೆ ಮುತ್ತಿಗೆ ಹಾಕುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣವೇ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಸಹ ಒತ್ತಾಯಿಸಿದರು.
ತಿಹಾರ್ ಜೈಲಿನಲ್ಲಿ ಬಂಧಿತರಾಗಿರುವ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಬೆಂಗಳೂರು ನಗರದಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆ ನಡೆಸುವ ಬದಲು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಿ ಎಂದು ಮೆರವಣಿಗೆ ನಡೆಸಿದರೆ ಚೆನ್ನಾಗಿತ್ತು ಎಂದು ಹೇಳಿದರು.
ಸಮಾರಂಭದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಹೆಚ್.ಎಂ. ರೇವಣ್ಣ, ಸಂಸ್ಕೃತಿ ಚಿಂತಕ ಡಾ.ಕೆ. ಮರುಳ ಸಿದ್ದಪ್ಪ, ಗ್ರಂಥ ಸಂಪಾದಕ ಕಾ.ತ. ಚಿಕ್ಕಣ್ಣ ಉಪಸ್ಥಿತರಿದ್ದರು. ಜನಮನ ಪ್ರಕಾಶನದ ಎಂ.ರಾಮಯ್ಯ ಸ್ವಾಗತಿಸಿದರು.

Leave a Comment