ಉಪ ಸಮರ ಮುಂದೂಡಿಕೆ: ಸುಪ್ರೀಂ ನಕಾರ: ಅನರ್ಹ ಶಾಸಕರ ಮನವಿ ನಿರಾಕರಣೆ: ಮತ್ತಷ್ಟು ಹೆಚ್ಚಿದ ಆತಂಕ

ನವದೆಹಲಿ, ನ. ೮- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ. 5 ರಂದು ನಡೆಯಲಿರುವ ಉಪಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿರುವುದು ಅನರ್ಹರನ್ನು ಇನ್ನಷ್ಟು ಆತಂಕ-ಚಿಂತೆಗೀಡು ಮಾಡಿದೆ.

  •  ಉಪ ಚುನಾವಣೆ ಮುಂದೂಡುವಂತೆ ಅನರ್ಹರ ಅರ್ಜಿ.
  •  ಬೇಡಿಕೆಯನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್.
  •  ಅನರ್ಹ ಶಾಸಕರಿಗೆ ಹೆಚ್ಚಿದ ಮತ್ತಷ್ಟು ಆತಂಕ.
  •  ತೀರ್ಪು ಕಾಯ್ದಿರಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆ ಅಸಾಧ್ಯ.
  •  ಸುಪ್ರೀಂ ಹೇಳಿಕೆ ಅನರ್ಹ ಶಾಸಕರಲ್ಲಿ ತಳಮಳಕ್ಕೆ ಕಾರಣ.
  •  ಸೋಮವಾರದಿಂದ ಉಪಚುನಾವಣೆ ಪ್ರಕ್ರಿಯೆ ಆರಂಭ.

ಉಪ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ನಿರಾಕರಿಸಿದೆ.

ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಾದ-ಪ್ರತಿವಾದ ಮುಗಿದು ತೀರ್ಪನ್ನು ಕಾಯ್ದಿರಿಸಲಾಗಿದೆ. ಇಂತಹ ಸಮಯದಲ್ಲಿ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಬರುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ರಮಣ ನೇತೃತ್ವದ ನ್ಯಾಯಪೀಠ ಅನರ್ಹರ ಬೇಡಿಕೆಯನ್ನು ತಳ್ಳಿ ಹಾಕಿದೆ.
ಸೋಮವಾರದಿಂದ ಉಪ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರಲ್ಲಿ ಆತಂಕ-ತಳಮಳ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಚುನಾವಣಾ ಮುಂದೂಡಿಕೆ ಮಾಡುವಂತೆ ಸುಪ್ರೀಂಕೋರ್ಟ್ ನಿರಾಕರಿಸುತ್ತಿದ್ದಂತೆ ಕಡೇ ಪಕ್ಷ ಅರ್ಜಿಯನ್ನು ದಾಖಲಿಸಿಕೊಳ್ಳಿ ಎಂದು ಅನರ್ಹರ ಪರ ವಕೀಲ ಮುಕುಲ್ ರೋಹಟಗಿ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಬರುವ ಬುಧವಾರಕ್ಕೆ ಅರ್ಜಿಯನ್ನು ಪಟ್ಟಿಗೆ ಸೇರಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

ತಲೆಕೆಳಗಾದ ಲೆಕ್ಕಾಚಾರ
ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಲಾಪ ಪಟ್ಟಿಯಲ್ಲಿ ಇಂದು ವಿಷಯ ಪ್ರಸ್ತಾಪವಾಗದಿರುವುದು ಅನರ್ಹ ಶಾಸಕರಲ್ಲಿ ಆತಂಕ ಹೆಚ್ಚು ಮಾಡಿದೆ. ಇಂದು ತೀರ್ಪು ಹೊರ ಬೀಳಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರ ಲೆಕ್ಕಾಚಾರ ತಲೆಕೆಳಗಾಗಿದೆ.
ಆಡಿಯೋ ಸಂಕಷ್ಟಕೆ ಸಿಲುಕಿ ಪರದಾಡುತ್ತಿರುವ ಅನರ್ಹ ಶಾಸಕರಿಗೆ ತೀರ್ಪು ಇಂದು ಹೊರ ಬೀಳದಿರುವುದು ಮತ್ತಷ್ಟು ತಲೆಬಿಸಿ ತರಿಸಿದೆ.

ತಡೆ ಅಸಾಧ್ಯ
ಅನರ್ಹ ಶಾಸಕರ ಪ್ರಕರಣದ ವಾದ-ಪ್ರತಿವಾದ ಮುಗಿದು ತೀರ್ಪು ಕಾಯ್ದಿರಿಸಿದ ಸಂದರ್ಭದಲ್ಲಿ ಉಪ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡುವುದು ಅಸಾಧ್ಯ ಸಂಗತಿ. ಈ ಸಂಬಂಧ ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡಲು ಸಾಧ್ಯವಿಲ್ಲ.
-ನ್ಯಾ. ಎನ್.ವಿ ರಮಣ
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ

Leave a Comment