ಉಪ್ಪು ತಿಂದವ ನೀರು ಕುಡಿಯಲೇಬೇಕು

ಮಂಗಳೂರು, ನ. ೮- ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಾನೂನಿನಂತೆ ಕ್ರಮವಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.

ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಈಗ ಬಿಜೆಪಿಯಲ್ಲಿ ಇಲ್ಲ. ಅವರ ಮೇಲಿನ ಆರೋಪದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.

ಕೇರಳಕ್ಕೆ ತೆರಳಲು ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನಿನಂತೆ ಕ್ರಮವಾಗಲೇಬೇಕು ಎಂದಷ್ಟೇ ಹೇಳಿದರು.

ಉಪಚುನಾವಣಾ ಫಲಿತಾಂಶಗಳ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ ಮತ್ತೆ ಮತ್ತೆ ಆ ಬಗ್ಗೆ ಮಾತನಾಡುವುದು ಬೇಡ. ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಲು ಬಯಸಲಿಲ್ಲ.

ಕೇರಳದಲ್ಲಿ ಬಿಜೆಪಿ ಆರಂಭಿಸಲಿರುವ ರಥಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪನವರು ಮಂಗಳೂರಿನಿಂದ ಕೇರಳಕ್ಕೆ ತೆರಳಿದರು.

ಮಂಗಳೂರಿಗೆ ಆಗಮಿಸಿದ ಯಡಿಯೂರಪ್ಪನವರನ್ನು ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಶ್ರೀನಿವಾಸಪೂಜಾರಿ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

Leave a Comment