ಉಪ್ಪಿ ಸ್ಟೈಲ್‌ನಲ್ಲಿ ನಾನೊಬ್ನೆ ಓಳ್ಳೆವ್ನು

ಸಿನೆಮಾದ ವಿವಾದದ ನಡುವೆ ಬಿಡುಗಡೆಯಾಗಿರುವ ನಾನೊಬ್ನೆ ಓಳ್ಳೆವ್ನು ಚಿತ್ರದ ಹಾಡುಗಳಿಗೆ ಚಿತ್ರರಂಗದ ಗಣ್ಯರು ಮನತುಂಬಿ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಚಿತ್ರ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿವರಾಜ್‌ಕುಮಾರ್, ರಂಗಿತರಂಗ ಖ್ಯಾತಿ ಅರವಿಂದ್,ಭಗವಾನ್.ಜಿ.ಮೂರ್ತಿ ಮುಂತಾದವರು ಹಾಡುಗಳ ಮೇಕಿಂಗ್ ಚೆನ್ನಾಗಿದೆ ಎಂದು ಹೊಗಳಿದರು.

ಸತ್ಯದೇವ್ ಐಪಿಎಸ್ ಡಬ್ಬಿಂಗ್ ಸಿನಿಮಾವನ್ನು ಜನರು ತಿರಸ್ಕರಿಸಿ ಒಳ್ಳೆಯವರಾಗಿದ್ದಾರೆ ಮುಂದೆ ಇದೇ ಗತಿ ಡಬ್ಬಿಂಗ್ ಸಿನೆಮಾಗಳಿಗೆ ಎನ್ನುವ ಸಂದೇಶವನ್ನು ಸಾರಿದ್ದಾರೆ ಎಂದ ಶಿವರಾಜ್ ಕುಮಾರ್ ನಾನೊಬ್ನೆ ಓಳ್ಳೆವ್ನು ಚಿತ್ರವನ್ನು ವಿಜಯ್‌ಮಹೇಶ್ ಕಷ್ಟಪಟ್ಟು ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕತೆ,ಚಿತ್ರಕತೆ,ಸಂಭಾಷಣೆ, ೬ ಹಾಡಿಗೆ ಸಾಹಿತ್ಯ ಬರೆದು ಮೊದಲಬಾರಿಗೆ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ವಿಜಯ್‌ಮಹೇಶ್ ಉಪ್ಪಿ ಚಿತ್ರಗಳನ್ನು ನೋಡಿ ಪ್ರೇರಣೆಗೊಂಡು ಕತೆಯನ್ನು ಸಿದ್ದಪಡಿಸಿದ್ದೇನೆ. ಪ್ರತಿಯೊಬ್ಬ ಮನುಷ್ಯನು ತಾನು ಒಳ್ಳೆಯವನೆಂದು ಭಾವಿಸಿಕೊಂಡು ತಪ್ಪನ್ನು ಮಾಡುತ್ತಿರುತ್ತಾನೆ. ಯಾರೇ ಹೇಳಿದರೂ ತಪ್ಪನ್ನು ತಿದ್ದಿಕೊಳ್ಳುವುದಿಲ್ಲ. ಮನುಷ್ಯರ ಇಂಥ ತಪ್ಪುಗಳನ್ನು ಚಿತ್ರದ ಮೂಲಕ ತಿದ್ದುವ ಪ್ರಯತ್ನ ಮಾಡಲಾಗಿದೆ ಎನ್ನುವ ವಿವರ ನೀಡಿದರು.

ಮಿಂಚಿನ ಮಳೆಯಲಿ ನನ್ನ ಇಷ್ಟದ ಹಾಡು ಎಂದ ನಾಯಕಿ ಸೌಜನ್ಯ, ಈ ಚಿತ್ರದಿಂದಉತ್ತಮ ಅವಕಾಶಗಳು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇನೆ ಎಂದರೆ, ಮತ್ತೊಬ್ಬ ನಾಯಕಿ ಒರಿಸ್ಸಾ ಮೂಲದ ಅನಿಪ್ರಿನ್ಸಿ ತೊದಲು ಕನ್ನಡದಲ್ಲಿ ಮಾತನಾಡಿದ್ದು ಖುಷಿ ನೀಡಿತು.

ಕಡಿಮೆ ಬಜೆಟ್ ನಿರ್ಮಾಪಕರ ಸಿನೆಮಾಗಳಿಗೆ ಚಿತ್ರಮಂದಿರಗಳು ಸಿಗುವಂತೆ ಹಿರಿಯ ಕಲಾವಿದರು ಸರ್ಕಾರದ ಹಂತದಲ್ಲಿ ಚರ್ಚೆ ಮಾಡಿ ಮಾನದಂಡ ರೂಪಿಸಬೇಕು ಎಂದು ರಂಗಿತರಂಗ ಖ್ಯಾತಿ ಅರವಿಂದ್ ಮನವಿ ಮಾಡಿದರು. ಸಿನಿಮಾ ನೋಡಿದ್ದೇನೆ. ಹಳೇ ಬೇರು, ಹೂಸ ಚಿಗುರು ಸುಂದರವಾಗಿ ಬಂದಿದೆ. ಉಪೇಂದ್ರ ಮಾದರಿಯಲ್ಲಿ ಸಮಾಜವನ್ನು ತಿದ್ದುವ ರೀತಿಯಲ್ಲಿ ಸಿನೆಮಾ ಮಾಡಿದ್ದಾರೆ ಒಳ್ಳೆಯದಾಗಲಿ ಎಂದು ಭಗವಾನ್ ಶುಭ ಹಾರೈಸಿದರು.

ಅತಿಥಿಯಾಗಿ ಲಹರಿ ವೇಲು, ಸುನಾಮಿಕಿಟ್ಟಿ, ಜಿ.ಮೂರ್ತಿ, ನಾಯಕ ರವಿತೇಜ ಎಲ್ಲರೂ ಶಿವಣ್ಣರನ್ನು ಶಿವನಿಗೆ ಹೋಲಿಸಿದಾಗ ಶಿವರಾಜ್‌ಕುಮಾರ್ ನಾನು ಸಹ ಶಿವನ ಆರಾಧಕ. ಮನುಷ್ಯರನ್ನು ದೇವರಿಗೆ ಹೋಲಿಸಬೇಡಿ ವಿನಮ್ರವಾಗಿ ಕೋರಿದರು. ಟಿ.ಎಂ.ಬಸವರಾಜು ನಿರ್ಮಾಪಕರಾಗಿದ್ದು, ಸಂಗೀತ ಸಂಯೋಜಿಸಿರುವ ಸುದೀರ್‌ಶಾಸ್ತ್ರೀ ಒಂದು ಗೀತೆ ರಚಿಸಿದ್ದಾರೆ.

Leave a Comment