‘ಉಪ್ಪಿನ ಕಾಗದ’

‘ಉಪ್ಪಿನ ಕಾಗದ’ ಫೆ.೨ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರ ರೂಪುಗೊಂಡಿದ್ದನ್ನು ಚಿತ್ರತಂಡ ಇತ್ತೀಚೆಗೆ ನಡೆದ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಡಿಬಿಡಿಯಾಗಿ ಬಿಡಿಸಿಟ್ಟಿತು.

‘ಉಪ್ಪಿನ ಕಾಗದ’ಎಂದರೆ ಸಪಾಟು ಮಾಡಲು ಬಳಸುವ ಎಮ್ರಿ ಪೇಪರ್ ಸ್ಯಾಂಡ್ ಪೇಪರ್ ಅಲ್ಲ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸಪಾಟು ಮಾಡಿದರೆ ಬದುಕು ಸುಂದರವಾಗುತ್ತದೆ ಎನ್ನುವ ಉದ್ದೇಶದಿಂದ ‘ಉಪ್ಪಿನ ಕಾಗದ’ ಚಿತ್ರ ಮಾಡಿದ್ದಾಗಿ ಹೇಳುವುದರೊಂದಿಗೆ ಸಿನೆಮಾ ಸೂಕ್ಷ್ಮತೆಗಳನ್ನು ನಿರ್ದೇಶಕ ಬಿ. ಸುರೇಶ್ ಬಿಚ್ಚಿಟ್ಟರು.

ಮೌನವನಿಟ್ಟು ಸಿನೆಮಾ ಮಾಡಬೇಕೆನ್ನುವ ಆಸೆ ಇತ್ತು ಅದು ಈ ಸಿನೆಮಾದಿಂದ ಸಾಧ್ಯವಾಗಿದೆ ಎನ್ನುವ ಸಂತಸ ಅವರಲ್ಲಿತ್ತು. ತಮ್ಮ ಗೆಳೆಯ ಹೇಳಿದ ಅಫ್ಘಾನಿಸ್ತಾನದ ಕಥೆ ಮತ್ತು ಬಾಗಲುಕೋಟೆ ಹಾಗು ಅಫ್ಜಲ್‌ಪುರದ ನಡುವೆ ನಡೆದಿದ್ದ ಘಟನೆಯನ್ನು ಮಿಳಿತಗೊಳಿಸಿ ಉಪ್ಪಿನ ಕಾಗದ ಚಿತ್ರದ ಕಥೆಯನ್ನು ವರ್ಷಗಳಿಂದ ಸಿದ್ಧಪಡಿಸಿವುದನ್ನು ಅವರು ವಿವರಿಸಿದರು.

ಅವರು ಈ ಚಿತ್ರದಲ್ಲಿ ನದಿಯನ್ನು ರೂಪಕವಾಗಿ ಬಳಸಿದ್ದಾರೆ ಈ ಕಾರಣದಿಂದಾಗಿ ಚಿತ್ರ ನೋಡಿ ಹೊರ ಬರುವ ಪ್ರೇಕ್ಷಕರಿಗೆ ತಾವೂ ನದಿಯಾಗಬೇಕು ಎನಿಸಿದರೆ ಚಿತ್ರ ಗೆದ್ದಂತೆ ಎಂದು ಭಾವಿಸುವುದಾಗಿ ಹೇಳುತ್ತಾ ಭಾವುಕರಾದರು.

ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ ಅವರನ್ನು ಕರೆತರಲು ಸಾಧ್ಯವಾಗಿದ್ದರೆ ಚಿತ್ರದಲ್ಲಿ ನಾಗಾಭರಣ ಅವರು ನಟಿಸಿರುವ ಪಾತ್ರದಲ್ಲಿ ಅವರನ್ನು ತರುತ್ತಿದ್ದೆ ಎನ್ನುವ ತಮಗಿದ್ದ ಆಶಯವನ್ನು ಸುರೇಶ್ ಹೇಳಿಕೊಂಡರು. ಬಹುಶಃ ನಾಗಾಭರಣ ಅವರು ಇಂಥ ಪಾತ್ರವನ್ನು ಸಿನೆಮಾದಲ್ಲಿ ಇದುವರೆಗೆ ನಟಿಸಿಲ್ಲ.

ಈ ಕಾರಣದಿಂದಾಗಿ ಅವರು ಪಾತ್ರ ನಿರ್ವಹಿಸುವುದು ಧ್ಯಾನವೇ ಆಗಿತ್ತು, ಚಿತ್ರೀಕರಣ ನಡಸಿದ ೧೪ ದಿನಗಳ ಒಟ್ಟಾರೆ ಕ್ಷಣಗಳೂ ಪಾತ್ರವೇ ಆಗಿದ್ದಕ್ಕೆ ಸುರೇಶ್ ತಮ್ಮ ಕೂದಲು ಕತ್ತರಿಸಿದ್ದು, ಎರಡು ಸೆಟ್ ಮಾತ್ರವೇ ಕಾಸ್‌ಟ್ಯೂಮ್ ಕೊಟ್ಟು ಅದರಲ್ಲಿಯೇ ಇರುವಂತೆ ಮಾಡಿದ್ದು, ನದಿ ಪಾತ್ರದ ಜಾರುವ ಬಂಡೆಗಳ ಮೇಲೆ ಬರಿಗಾಲಿನಲ್ಲಿ ನೈಜವಾಗಿ ನಡೆಯುವಂತೆ ಮಾಡಿದ್ದು ಎಲ್ಲವೂ ಪೂರಕವಾಗಿತ್ತು ಎಂದೇ ಹೇಳಿದರು. ಜಾಗತಿಕ ಚಲನಚಿತ್ರ ಇತಿಹಾಸಕ್ಕೆ ಉಪ್ಪಿನ ಕಾಗದ ಕೊಡುಗೆಯಾಗಲಿ ಎನ್ನುವ ಶುಭ ಹಾರೈಕೆ ಅವರದಾಗಿದೆ.

ಚಿತ್ರಕ್ಕೆ ಕಥೆಯೇ ನಾಯಕ ಹೀಗಾಗಿ ಕಥಾನಾಯಕಿಯಾಗಿರು ಅಪೂರ್ವ ಭಾರದ್ವಾಜ್ ಧಾರಾವಾಹಿಯಿಂದ ಪರಿಚಿತೆ. ಸಿನೆಮಾರಂಗದಲ್ಲಿ ದೊಡ್ಡ ಹೆಸರಾದವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ತಾನು ಬಹಳಷ್ಟು ಕಲಿತೆ ಎಂದರು.

ಸಂಗೀತ ನಿರ್ದೇಶಕ ಹರಿಕೃಷ್ಣ ತಮ್ಮ ಮ್ಯೂಸಿಯನ್ಸ್‌ಗೆ ಈ ಚಿತ್ರದ ಹಾಡುಗಳ ಟ್ಯೂನ್ ಕೊಟ್ಟಾಗ ಅವರುಗಳು ಇದು ಯಾರ ಮ್ಯೂಸಿಕ್? ಎಂದು ಕೇಳಿದ್ದನ್ನು ತಮಾಷೆಯಾಗಿಯೇ ತಿಳಿಸಿದರು. ಆದರೆ ಸಿ. ಅಶ್ವತ್ಥ್, ಮೈಸೂರು ಅನಂತಸ್ವಾಮಿ ಅವರಿಗೆ ತಾವು ಕೀಬೋರ್ಡ್ ನುಡಿಸುತ್ತಿದ್ದರಿಂದ ಈ ಚಿತ್ರದಲ್ಲಿರುವ ಸಂಗೀತಕ್ಕೆ ತಾನು ಹೊಸಬನಲ್ಲ ಎಂದರಲ್ಲದೆ, ಇಂಥ ಅವಕಾಶ ಕೊಟ್ಟಿ ದ್ದಕ್ಕೆ ಸುರೇಶ್ ಅವರಿಗೆ ಕೃತಜ್ಞತೆ ತಿಳಸಿದರು. ಚಿತ್ರದ ಹಾಡುಗಳನ್ನು ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಸಂಗೀತ ಕಟ್ಟಿ ಮತ್ತು ಫಯಾಜ್‌ಖಾನ್ ಹಾಡಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಸುರೇಶ್ ಅವರು ರಚಿಸಿರುವ ಗೀತೆಗಳು ನದಿಯ ಜೊತೆಯಾಗಿ ಹರಿಯುತ್ತವೆ ಅಂದರೆ ನದಿ ಹಿನ್ನೆಲೆಯಲ್ಲಿ ಚಿತ್ರೀಕರಿಸಿ ಅಲ್ಲಿರುವ ನೈಜ ದ್ವನಿಯನ್ನೇ ಬಳಸಿರುವುದು ವಿಶಿಷ್ಟವಾಗಿದೆ. ಚಿತ್ರದ ಟ್ರೇಲರ್ ಕುತೂಹಲ ಮೂಡಿಸುತ್ತದೆ.

Leave a Comment