ಉಪ್ಪಿನಂಗಡಿಯಲ್ಲಿ ಕಾಟಾಚಾರದ ಫಾಗಿಂಗ್

ಉಪ್ಪಿನಂಗಡಿ, ಆ.೭- ಆರೋಗ್ಯ ಇಲಾಖೆಯು ಸೊಳ್ಳೆಗಳ ನಿಯಂತ್ರಣಕ್ಕಾಗಿ ಉಪ್ಪಿನಂಗಡಿ ಪೇಟೆಯಲ್ಲಿ ಸೋಮವಾರ ನಡೆಸಿದ ಫಾಗಿಂಗ್ ಕಾರ್ಯವು ಕಾಟಾಚಾರಕ್ಕೆ ನಡೆಸಿದಂತಿತ್ತು ಎಂಬ ಟೀಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಉಪ್ಪಿನಂಗಡಿ ಪೇಟೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿದ್ದು, ಉಪ್ಪಿನಂಗಡಿ ಗ್ರಾ.ಪಂ. ಪಿಡಿಓ ಸೇರಿದಂತೆ ಈಗಾಗಲೇ ಹಲವರಿಗೆ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದರು. ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿಯೂ ಇದು ಚರ್ಚೆಯಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಜರಗಿಸಲು ಆರೋಗ್ಯ ಇಲಾಖೆಯನ್ನು ಕೇಳಿಕೊಳ್ಳಲಾಗಿತ್ತು.
ಕಾಟಾಚಾರದ ಫಾಗಿಂಗ್: ನಿನ್ನೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪೇಟೆಯಲ್ಲಿ ಫಾಗಿಂಗ್ ಕಾರ್ಯ ನಡೆಸಿದರು. ಆದರೆ ಫಾಗಿಂಗ್ ಕಾರ್ಯವನ್ನು ಇವರು ಕಾಟಾಚಾರಕ್ಕೆ ನಡೆಸಿದಂತೆ ನಡೆಸಿದಂತಿದ್ದು, ೩೦ ನಿಮಿಷದೊಳಗೆ ಪೇಟೆಯಲ್ಲಿ ಫಾಗಿಂಗ್ ಕಾರ್ಯವನ್ನು ಮಾಡಿ ಮುಗಿಸಿದ್ದರು. ಹೆಚ್ಚಿನ ಕಡೆ ಚಲಿಸುತ್ತಿರುವ ಜೀಪಿನಲ್ಲಿಯೇ ಕುಳಿತುಕೊಂಡು ಫಾಗಿಂಗ್ ನಡೆಸಿದರೆ, ಕೆಲವು ಕಡೆ ಮಾತ್ರ ಜೀಪಿನಿಂದಿಳಿದು ಫಾಗಿಂಗ್ ನಡೆಸಲಾಯಿತು. ಸೊಳ್ಳೆಗಳ ಉತ್ಪಾದನೆಗೆ ಪ್ರಮುಖ ಕಾರಣವಾಗುತ್ತಿರುವ ನೀರು ನಿಂತ ಚರಂಡಿ, ಗುಂಡಿಗಳ ಬಳಿ, ತ್ಯಾಜ್ಯ ರಾಶಿ ಬಿದ್ದಿರುವ ಸ್ಥಳದ ಕಡೆಗೆ ಇವರು ತೆರಳಲೇ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಪ್ರಶ್ನೆಗಳ ಬಾಣದಿಂದ ತಪ್ಪಿಸುವ ಯತ್ನ?: ಆ.೭ರಂದು ಉಪ್ಪಿನಂಗಡಿಯಲ್ಲಿ ಗ್ರಾಮ ಸಭೆ ನಡೆಯಲಿದ್ದು, ಈ ಸಂದರ್ಭ ಗ್ರಾಮಸ್ಥರ ಪ್ರಶ್ನೆಗಳ ಬಾಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಗ್ರಾಮಸಭೆಯ ಮುನ್ನಾದಿನವಾದ ಆ.೬ರಂದು ಕಾಟಾಚಾರದ ಫಾಗಿಂಗ್ ನಡೆಸುವ ಮೂಲಕ ಗ್ರಾಮಸ್ಥರ ಕಣ್ಣಿಗೆ ಮನ್ನೆರಚುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆದಿದೆಯೇ ಎಂಬ ಸಂಶಯವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Leave a Comment