ಉಪ್ಪಾರ ಸಮಾಜ: ಎಸ್‌ಟಿ ಸೇರ್ಪಡೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಜ.12- ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಪ್ಪಾರ ಸಮಾಜದ ವತಿಯಿಂದ ಉಪ್ಪು ಕೈಯಲ್ಲಿ ಹಿಡಿದು ಉಪ್ಪಿನ ಸತ್ಯಾಗ್ರಹ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಸ್ಥಳೀಯ ಉಪ್ಪಾರವಾಡಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಱ್ಯಾಲಿ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆರ್ಥಿಕ , ಸಾಮಾಜಿಕ , ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತಿ ಹಿಂದುಳಿದಿರುವ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಉಪ್ಪಾರ ಸಮುದಾಯದ ಪಾತ್ರ ಪ್ರಮುಖವಾಗಿದೆ. 1970 ರಿಂದ 1945 ಆಗಸ್ಟ್ 8ರವರೆಗೆ ಉಪ್ಪಾರ ಸಮುದಾಯದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಆದರೆ, ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಿವಿಧ ಇಲಾಖೆಯಲ್ಲಿ ಸಮರ್ಪಕವಾಗಿ ಉಲ್ಲೇಖಿಸದಿರುವುದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಉಪ್ಪಾರ ಸಮುದಾಯವು ತಮ್ಮ ಕುಲಕಸುಬಾದ ಗಾರೆ ಕೆಲಸ, ಗೋಡೆ ಕಟ್ಟುವುದು, ಕಲ್ಲು ಹೊಡೆಯುವುದು ಮತ್ತು ಮಾಲ್‌ಗಳಲ್ಲಿ ಉಪ್ಪು ತಯಾರಿಸಿ, ಮಾರಾಟ ಮಾಡಿ, ತಮ್ಮ ಕುಟುಂಬವನ್ನು ಪೋಷಿಸಲಾಗುತ್ತದೆ. ಉದ್ಯೋಗದಲ್ಲಿ ವ‌ಡ್ಡರ ಸಮಾಜ, ಉಪ್ಪಾರ ಸಮಾಜದ ಕಸಬು ಒಂದೇಯಾಗಿದ್ದರೂ, ವಡ್ಡರ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಿ, ಉಪ್ಪಾರ ಸಮಾಜವನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗಿದೆ. ಕಾರವಾರ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಈಗಾಗಲೇ ಉಪ್ಪಾರ ಸಮುದಾಯವನ್ನು ಪರಿಸಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಅಲ್ಲದೇ ಪಶ್ಚಿಮ ಬಂಗಾಳದಲ್ಲಿಯೂ, ಉಪ್ಪಾರ ಸಮಾಜವು ಪರಿಶಿಷ್ಟ ಜಾತಿಯಲ್ಲಿದೆ ಬಿಹಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆದೋನಿ ಅಮರೇಶ, ಪಾಗುಂಟಪ್ಪ ಮಿರ್ಜಾಪುರು, ಸುರೇಖಾ, ಚಂದ್ರಶೇಖರ, ಸೂಗಪ್ಪ, ನಾರಾಯಣಪ್ಪ, ಈರಣ್ಣ, ಪಾಂಡುರಂಗ, ರುದ್ರಪ್ಪ, ಅಂಜಿನೇಯ, ಶ್ರೀನಿವಾಸ, ಚನ್ನಬಸವ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment