ಉಪೇಂದ್ರ ಆಟ ನಡೆಯಲ್ಲ: ಜಮೀರ್ ಅಹಮದ್

(ನಮ್ಮ ಪ್ರತಿನಿಧಿಯಿಂದ)
ತುಮಕೂರು, ಆ. ೧೩- ರಾಜಕೀಯದಲ್ಲಿ ಚಿತ್ರನಟ ಉಪೇಂದ್ರ ಅವರ ಆಟ ನಡೆಯಲ್ಲ. ಕರ್ನಾಟಕದಲ್ಲಿ ಚಿತ್ರನಟರನ್ನು ನೋಡಿ ಯಾರೂ ಮತ ಹಾಕುವುದಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಇಂದಿಲ್ಲಿ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್ ಶಾಸಕ ಡಾ. ರಫೀಕ್ಅಹಮದ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ನಟನೆಗೂ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯದಲ್ಲಿ ನಟನೆ ನಡೆಯುವುದಿಲ್ಲ. ಆದ್ದರಿಂದ ಉಪೇಂದ್ರ ಅವರ ರಾಜಕೀಯ ಪ್ರವೇಶ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು.

ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಖ್ಯಾತ ಚಿತ್ರನಟ ಶಿವಣ್ಣ ಅವರ ಪತ್ನಿ ಗೀತಾ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರನ್ನು ನೋಡಲು ಲಕ್ಷಾಂತರ ಮಂದಿ ಚುನಾವಣಾ ಪ್ರಚಾರದ ವೇಳೆ ಸೇರುತ್ತಿದ್ದರು. ಇದನ್ನು ನೋಡಿದ ನಮಗೆ ಗೀತಾ ಅವರ ಗೆಲುವು ನಿಶ್ಚಿತ ಎಂದು ಭಾವಿಸಿದ್ದೆವು. ಆದರೆ ಅಲ್ಲಿ ನಡೆದದ್ದೇ ಬೇರೆ. ನಟರನ್ನು ನೋಡಲು ಬರುತ್ತಿದ್ದ ಜನರು ಮತ ಹಾಕಿಲ್ಲ ಎಂಬುದು ಆ ಚುನಾವಣೆಯಲ್ಲಿ ಸಾಬೀತಾಯಿತು ಎಂದರು.

ನಟ ಉಪೇಂದ್ರ ಅವರ ಎಂದಿಗೂ ಬಡವರ ಸೇವೆ ಮಾಡಿಲ್ಲ. ಇದುವರಿಗೂ ಕೋಟ್ಯಂತರ ರೂ. ಹಣ ಸಿನಿಮಾ ರಂಗದಲ್ಲಿ ಸಂಪಾದಿಸಿದ್ದರೂ ಯಾವುದೇ ಬಡವರ ಪರ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಈಗ ದಿಢೀರನೆ ರಾಜಕೀಯಕ್ಕೆ ಬರುವ ಸಲುವಾಗಿ ಬಡವರ ಪರ ಕಾಳಜಿ ತೋರುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದರು.

ಸಿನಿಮಾ ಕ್ಷೇತ್ರದಿಂದ ನಿವೃತ್ತಿ ಪಡೆಯಲು ಮುಂದಾಗಿರುವ ಉಪೇಂದ್ರ ಅವರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ರಾಜಕೀಯ ಬೇರೆ, ಸಿನಿಮಾ ನಟನೆಯೇ ಬೇರೆ ಎಂದು ಅವರು ವ್ಯಾಖ್ಯಾನಿಸಿದರು. ‌ ರಾಜಕೀಯದಲ್ಲಿ ಸಿನಿಮಾ ಗಿಮಿಕ್ ಎಂದಿಗೂ ನಡೆಯುವುದಿಲ್ಲ. ಇದನ್ನು ನಟ ಉಪೇಂದ್ರ ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

Leave a Comment