ಉಪಸಮರ ಸಿದ್ದುಗೆ ಕೈ ಹೊಣೆ

ನವದೆಹಲಿ, ಅ. ೧೬- ರಾಜ್ಯದಲ್ಲಿ ನಡೆಯುವ ಉಪ-ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ರವರು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರಿಗೆ ವಹಿಸಲಾಗಿದೆ.
ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ದೆಹಲಿಯಲ್ಲಿ ಸೋನಿಯಾ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದ ಸಂದರ್ಭದಲ್ಲಿ ಸೋನಿಯಾ ಉಪ-ಸಮರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
ಉಪಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಹಿನ್ನೆಡೆಯಾಗದಂತೆ ಎಚ್ಚರವಹಿಸಿ, ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿದೆ.ಹಾಗಾಗಿ, ಒಗ್ಗಟ್ಟಿನಿಂದ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ನಾಯಕರನ್ನು ಒಟ್ಟಾಗಿ ಕರೆದುಕೊಂಡು ಚುನಾವಣೆಯನ್ನು ಎದುರಿಸಿ ಎಂದು ಸೋನಿಯಾರವರು ಕಿವಿಮಾತು ಹೇಳಿದರು ಎನ್ನಲಾಗಿದೆ.
ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಕಾರ್ಯತಂತ್ರ ಎಲ್ಲವನ್ನೂ ಸಿದ್ದರಾಮಯ್ಯ ಅವರು ಸೋನಿಯಾರವರ ಗಮನಕ್ಕೆ ತಂದು ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂಪಿಸಲಾಗಿದೆ ಎಂದು ಸೋನಿಯಾರವರಿಗೆ ತಿಳಿಸಿದರು ಎನ್ನಲಾಗಿದೆ. ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ತಮ್ಮನ್ನು ನೇಮಕ ಮಾಡಿದ ಸೋನಿಯಾಗಾಂಧಿಯವರಿಗೆ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

Leave a Comment