ಉಪಸಮರ ರಾಹುಲ್ ಮಧ್ಯಸ್ಥಿಕೆ ಅಭ್ಯರ್ಥಿಗಳ ಆಯ್ಕೆ ಬಿಕ್ಕಟ್ಟು ಪರಿಹರಿಸಲು ಸಮಾಲೋಚನೆ

ಬೆಂಗಳೂರು, ಅ. ೧೧- ವಿಧಾನಸಭೆ ಹಾಗೂ ಲೋಕಸಭೆಗಳ ಉಪಚುನಾವಣೆಗೆ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸುವಂತಾಗಿದೆ.
ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆಗಳ ಉಪಚುನಾವಣೆಯನ್ನು ದೋಸ್ತಿ ಪಕ್ಷಗಳು ಹಂಚಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದರೂ, ಯಾರಿಗೆ ಟಿಕೆಟ್ ನೀಡಬೇಕು ಹಾಗೂ ಯಾರಿಗೆ ಬಿಡಬೇಕು ಎನ್ನುವುದು ತಲೆನೋವಾಗಿ ಪರಿಣಮಿಸಿದ್ದು, ಇದು ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಮನಗಂಡಿರುವ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಂಗಪ್ರವೇಶ ಮಾಡುವಂತಾಗಿದೆ.
ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗಳು ನಡೆಯುವ ಜಿಲ್ಲಾ ಮುಖಂಡರುಗಳು, ಪಕ್ಷದ ಆಕಾಂಕ್ಷಿಗಳು, ಬಂಡಾಯವಾಗಿ ಕಣಕ್ಕಿಳಿಯಲು ಮುಂದಾಗಿರುವ ಅಭ್ಯರ್ಥಿಗಳ ಜೊತೆ ಸಂಜೆ ವೇಳೆಗೆ ವಿಡಿಯೋ ಸಂವಾದದ ಮೂಲಕ ಚರ್ಚೆ ನಡೆಸಿ ಎದುರಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಮುಂಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಬಳ್ಳಾರಿ, ಶಿವಮೊಗ್ಗ, ಮಂಡ್ಯ, ಲೋಕಸಭೆ ಹಾಗೂ ಜಮಖಂಡಿ, ರಾಮನಗರ, ವಿಧಾನಸಭೆಗಳ ಉಪಚುನಾವಣೆ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರೊಂದಿಗೆ ಮಾತುಕತೆ ನಡೆಸಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ಕಾಂಗ್ರೆಸ್ ಮುಖಂಡರು ಕಸರತ್ತು ನಡೆಸಿರುವಾಗಲೇ ರಾಹುಲ್‌ಗಾಂಧಿ ನೇರವಾಗಿ ಸ್ಥಳೀಯ ಮುಖಂಡರ ಜತೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಶತಾಯ-ಗತಾಯ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಹುಲ್‌ಗಾಂಧಿ ಚಿತ್ತ ಹರಿಸಿದ್ದಾರೆ. ಹಾಗಾಗಿ ಅವರು, ಅಭ್ಯರ್ಥಿ ಆಯ್ಕೆ ಸಂಬಂಧ ಇದೇ ಮೊದಲ ಬಾರಿಗೆ ಸ್ಥಳೀಯ ಮುಖಂಡರ ಜತೆ ಸಮಾಲೋಚನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಮುಂದುವರೆದ ಕಸರತ್ತು
ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಸಭೆ-ಸಮಾಲೋಚನೆಗಳು ಮುಂದುವರೆದಿದ್ದು, ಕಗ್ಗಂಟಾಗಿರುವ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್‌ರವರು ಇಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಿದರು.
ಶಾಸಕರ ವಿರೋಧ
ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಸಹೋದರನಿಗೆ ಲೋಕಸಭಾ ಉಪಚುನಾವಣೆ ಅಭ್ಯರ್ಥಿಯನ್ನಾಗಿಸಲು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಶಾಸಕರಾದ ತುಕರಾಂ, ಭೀಮಾನಾಯ್ಕ, ಆನಂದ್ ಸಿಂಗ್ ಇವರುಗಳು ಶಾಸಕ ಬಿ. ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್‌ಗೆ ಟಿಕೆಟ್ ನೀಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇಲ್ಲಿ ನಾಗೇಂದ್ರ ಸಹೋದರ ಚುನಾವಣೆಯಲ್ಲಿ ಗೆದ್ದರೇ ಸಚಿವ ಸ್ಥಾನಕ್ಕೆ ನಾಗೇಂದ್ರ ಬೇಡಿಕೆ ಇಡುತ್ತಾರೆ. ಇದರಿಂದ ತಮಗೆ ಸಚಿವರಾಗುವ ಅವಕಾಶ `ಕೈ’ ತಪ್ಪಬಹುದು ಎಂಬ ಲೆಕ್ಕಾಚಾರ ಈ ಶಾಸಕರದ್ದಾಗಿದೆ.
ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್‌ರವರಿಗೆ ವಹಿಸಲಾಗಿದೆ.
ಬಳ್ಳಾರಿಯ ಶಿರಗುಪ್ಪದಿಂದ ಕಳೆದ ಬಾರಿ `ಕೈ’ ಟಿಕೆಟ್ ತಪ್ಪಿದ್ದ ಮಾಜಿ ಶಾಸಕ ನಾಗರಾಜರವರ ಹೆಸರು ಈಗ ಮುನ್ನಲೆಗೆ ಬಂದಿದ್ದು, ಇವರು ಸಹ ಟಿಕೆಟ್‌ಗೆ ಲಾಭಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಆಯ್ಕೆ ಸಹ ಕಗ್ಗಂಟಾಗಿದ್ದು, ಇಲ್ಲಿ ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಟಿಕೆಟ್‌ಗೆ ಪಟ್ಟು ಹಿಡಿದಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ ಇಲ್ಲವೆ ಮುಖಂಡ ಮಂಜುನಾಥ ಭಂಡಾರಿ ಅವರನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದ್ದ `ಕೈ’ ಮುಖಂಡರು ಬೇಳೂರು ಗೋಪಾಲಕೃಷ್ಣ ಹಾಕಿರುವ ಹೊಸ ಪಟ್ಟಿನಿಂದ ಗೊಂದಲಕ್ಕೆ ಒಳಗಾಗಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಿವಮೊಗ್ಗ ಜಿಲ್ಲಾ ಮುಖಂಡರ ಜತೆ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಖೈರುಗೊಳಿಸಲಿದ್ದಾರೆ.
ಬಿಜೆಪಿ ಇಂದು ಸಭೆ
ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಿರುವ ಬಿಜೆಪಿ ಮುಖಂಡರು ಮಂಡ್ಯ ಲೋಕಸಭಾ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಇಂದು ಸಭೆ ನಡೆಸುವರು.
ಮಂಡ್ಯ ಲೋಕಸಭಾ ಉಪಚುನಾವಣೆಗೆ ವಿಧಾನ ಪರಿಷತ್‌ನ ಮಾಜಿ ಸಚಿವ ಅಶ್ವತ್ಥ ನಾರಾಯಣ, ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರುದ್ರೇಶ್ ಇಲ್ಲವೆ ಕಾಂಗ್ರೆಸ್ ಮುಖಂಡ ಸಿ.ಎಂ. ಲಿಂಗಪ್ಪ ಪುತ್ರ ಎಲ್. ಚಂದ್ರಶೇಖರ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಮಂಡ್ಯಕ್ಕೆ ನಿಖಿಲ್!
ಜೆಡಿಎಸ್‌ನಲ್ಲಿ ರಾಮನಗರ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪೈಪೋಟಿ ಇದೆಯಾದರೂ ಕುಮಾರಸ್ವಾಮಿ ಪುತ್ರ ನಿಖಿಲ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

Leave a Comment