ಉಪಸಮರ: ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು, ಮೇ ೧೬- ರಾಜ್ಯ ರಾಜಕಾರಣದ ದಿಕ್ಕುದೆಸೆಯನ್ನು ನಿರ್ಧರಿಸಲಿದೆ ಎಂದೇ ಭಾವಿಸಲಾಗಿರುವ ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರದ ಉಪಚುನಾವಣೆ ಮೇ 19 ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆಬೀಳಲಿದೆ.

ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಉಂಟಾಗಲಿದೆ ಎಂದು ಚುನಾವಣೆಯ ಆರಂಭದಿಂದಲೂ ಪ್ರತಿಪಕ್ಷ ಬಿಜೆಪಿ ಅಧ್ಯಕ್ಷ ಬಿ.ಎಸ್. ಯ‌ಡಿಯೂರಪ್ಪ ಸೇರಿದಂತೆ, ಆ ಪಕ್ಷದ ಹಲವು ನಾಯಕರು ಹೇಳುತ್ತಲೇ ಬಂದಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ವಿಧಾನಸಭೆಯಲ್ಲಿನ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಪಕ್ಷೇತರರ ಬೆಂಬಲ ಪಡೆದು ತಮ್ಮದೇ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಗುವುದೆಂಬ ವಿಶ್ವಾಸವನ್ನು ಈ ನಾಯಕರು ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮತ್ತು ಇತರ ನಾಯಕರ ಹೇಳಿಕೆಗಳನ್ನು ತಳ್ಳಿಹಾಕುತ್ತಲೇ ಬಂದಿರುವ ದೋಸ್ತಿ ಪಕ್ಷಗಳು ಸರ್ಕಾರಕ್ಕೆ ಯಾವುದೇ ಬಾಧಕ ಇಲ್ಲ. ಫಲಿತಾಂಶ ದೋಸ್ತಿಗಳ ಪರವಾಗಿ ಹೊರಹೊಮ್ಮಲಿದ್ದು, ಉಳಿದ ನಾಲ್ಕು ವರ್ಷಗಳನ್ನು ನಿರಾತಂಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೂರೈಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿವೆ.

ಚಿಂಚೋಳಿಯನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪೌರಾಡಳಿತ ಸಚಿವರಾಗಿದ್ದ ಕಾಂಗ್ರೆಸ್‌ನ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಅನುಕಂಪದ ಆಧಾರದ ಮೇಲೆ ಗೆಲುವು ಸಾಧಿಸುವ ಉದ್ದೇಶದಿಂದ ಕುಸುಮಾವತಿ ಅವರನ್ನು ಕಣಕ್ಕಿಳಿಸಲಾಗಿದೆ.

ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಪರಿಗಣಿಸಿರುವ ಕಾಂಗ್ರೆಸ್ – ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕ್ಷೇತ್ರಗಳಲ್ಲಿ ಹಗಲಿರುಳೂ ಸುತ್ತಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯ‌ಡಿಯೂರಪ್ಪ ಸೇರಿದಂತೆ, ಆ ಪಕ್ಷದ ದೊಡ್ಡ ತಂದವೇ ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ಎಲ್ಲಾ ರೀತಿಯ ಕಸರತ್ತು ನಡೆಸಿದ್ದಾರೆ.

ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್ ಸೇರಿದಂತೆ, ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರದ ಹಲವಾರು ಸಚಿವರು, ಶಾಸಕರು, ಮುಖಂಡರು ಕ್ಷೇತ್ರಗಳಲ್ಲಿ ಮೊಕ್ಕಾಂ ಹೂಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಸರ್ವಪ್ರಯತ್ನ ಮಾಡುತ್ತಿದ್ದಾರೆ.

Leave a Comment