ಉಪಸಮರ, ದೋಸ್ತಿಗಳ ವಿಜಯ ಮಹಾಮೈತ್ರಿಗೆ ನಾಂದಿ

ಬೆಂಗಳೂರು, ನ. ೮- ರಾಜ್ಯದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೆ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಮಹಾ ಮೈತ್ರಿಕೂಟ ರಚಿಸುವ ಪ್ರಯತ್ನಗಳಿಗೆ ಬಲ ಬಂದಿದೆ,

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಮಹಾಮೈತ್ರಿ ಕೂಟ ರಚನೆಗೆ ಮುಂಚೂಣಿಯಲ್ಲಿ ನಿಂತಿದ್ದು, ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಪ್ರಮುಖ ಮುಖಂಡರುಗಳನ್ನು ಭೇಟಿ ಮಾಡಿ ಮಹಾಮೈತ್ರಿ ಕೂಟ ರಚನೆಯ ಕಸರತ್ತನ್ನು ನಡೆಸಿದ್ದಾರೆ.

ಕಳೆದ ಒಂದು ವಾರದಿಂದ ದೇಶದ ಹಲವು ಪಕ್ಷಗಳ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ  ಚಂದ್ರಬಾಬುನಾಯ್ಡುರವರು ಇಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ

ನಾಳೆ ಚೆನ್ನೈಗೆ ತೆರಳಲಿರುವ ಚಂದ್ರಬಾಬು ನಾಯ್ಡು ಅವರು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರ ಜತೆ ಚರ್ಚೆ ನಡೆಸುವರು.

ಬಿಜೆಪಿ ದೂರವಿಟ್ಟು ಮಹಾಮೈತ್ರಿ ಕೂಟ ರಚನೆಗೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಈಗಾಗಲೇ ಒಲವು ತೋರಿದ್ದಾರೆ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದನ್ನು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಸ್ವಾಗತಿಸಿದ್ದರು. ನಾಳೆ ಚಂದ್ರಬಾಬುನಾಯ್ಡು ಸ್ಟಾಲಿನ್ ಅವರ ಜತೆ ಚರ್ಚೆ ನಡೆಸಿ ಮಹಾಮೈತ್ರಿ ಕೂಟ ರಚನೆಯ ಉದ್ದೇಶಗಳನ್ನು ವಿವರಿಸುವರು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಈಗಾಗಲೇ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್, ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಮತ್ತು ಸೀತಾರಾಮ್ ಯೆಚೂರಿ, ಎಂಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರುಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಂದಾಗಿ ಮಹಾಮೈತ್ರಿ ಕೂಟ ರಚನೆಯ ಸಂಬಂಧ ಚರ್ಚೆ ನಡೆಸಿದ್ದಾರೆ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಸದ್ಯದಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ ಜತೆ ಸಹ ಸದ್ಯದಲ್ಲೇ ಚರ್ಚೆ ನಡೆಸಲಿದ್ದಾರೆ.

Leave a Comment