ಉಪಸಮರ ಕೈ ಹಿಡಿಯಲು ಗೌಡರ ಸುಳಿವು

ಬೆಂಗಳೂರು, ಸೆ. ೧೨- ಮೈತ್ರಿ ಸರ್ಕಾರದ ಪತನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಕಾರಣವೆಂದು ಬಹಿರಂಗವಾಗಿಯೇ ಗುಡುಗಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಮಿಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.

ಉಪ ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಷ್ಟರೊಳಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಹಮತಕ್ಕೆ ಬರಲಿ ಎಂದು ಮನವಿ ಮಾಡಿದ್ದಾರೆ.

17 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರು. ಈ ಮೂರು ಕ್ಷೇತ್ರಗಳು ಜೆಡಿಎಸ್ ಕೈ ತಪ್ಪುವ ಆತಂಕ ದೇವೇಗೌಡರನ್ನು ಕಾ‌ಡುತ್ತಿದ್ದು ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ. ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಯಾರು ಏನೆಲ್ಲಾ ಮಾತನಾಡಿದರು ಎಂಬುದು ಗೊತ್ತಿದೆ. ಇದೆಲ್ಲಾ ಗೊತ್ತಿದ್ದರೂ ಈವರೆಗೆ ಸುಮ್ಮನಿದ್ದೆ, ಇದೆಲ್ಲಾ ಗೊತ್ತಿದ್ದರೂ ಇನ್ನುಮುಂದೆ ಸಹಿಸಿಕೊಂಡಿರಲು ಸಾಧ್ಯವಿಲ್ಲ.

ಇನ್ನುಮುಂದೆ ಇಂತಹ ಮಾತುಗಳು ನಡೆಯುವುದಿಲ್ಲ. ಯಾರೂ ನಮ್ಮ ಪಕ್ಷವನ್ನು ‘ಬಿ’ ಟೀಮ್ ಎಂದು ಕರೆಯುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಗುಡುಗಿದ್ದಾರೆ.

ಕಳೆದ ಚುನಾವಣೆ ವೇಳೆ ಕಾಂಗ್ರೆಸ್‌ನವರು ಏನೆಲ್ಲಾ ತಿಪ್ಪರಲಾಗ ಹಾಕಿದರೂ, 130 ಸ್ಥಾನ ಇದ್ದವರು ಕೊನೆಗೆ 78ಕ್ಕೆ ಇಳಿಯಬೇಕಾಯಿತು. ಈ ಹಿನ್ನೆಲೆಯನ್ನು ಜೆಡಿಎಸ್ ಪಕ್ಷದ ಬಗ್ಗೆ ವ್ಯಂಗ್ಯವಾಡುವವರು ಅರ್ಥ ಮಾಡಿಕೊಳ್ಳಬೇಕು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ಜೆಡಿಎಸ್ ಪಕ್ಷವನ್ನು ತೊರೆಯುವುದಾಗಿ ಹೇಳಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರ ಬಗ್ಗೆ ಗರಂ ಆದ ಮಾಜಿ ಪ್ರಧಾನಿ ನಾನು ಅವರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರ ಕಣ್ಣಮುಂದೆಯೇ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದೇತರುತ್ತೇನೆ. ಅಲ್ಲಿಯವರೆಗೂ ನನಗೆ ದೇವರು ಆಯಸ್ಸು ನೀಡಿದ್ದಾನೆ. ಅವರು ಇನ್ನೂ ಚಿಕ್ಕವರು. ನನಗೆ ಈಗ 82 ವರ್ಷ, ನನಗೆ ಸ್ವಾಭಿಮಾನವಿದೆ, ದೈವಶಕ್ತಿಯೂ ಇದೆ. ಪಕ್ಷ ಅಧಿಕಾರಕ್ಕೆ ಬಂದಾಗ ಅವರಿಗೊಂದು ಒಳ್ಳೆಯ ಊಟ ಕೊಡಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ 5 ಸುತ್ತಿನ ಮಾತುಕತೆ ನಡೆದಿದೆ. ಅನರ್ಹ ಶಾಸಕರಾಗಿರುವ ಗೋಪಾಲಯ್ಯ, ಪಕ್ಷದ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆ. ಅವರೇನಾದರೂ, ಕಾರ್ಯಕರ್ತರಿಗೆ ಭಯ ಹುಟ್ಟಿಸುತ್ತೇನೆ ಎಂದು ಅಂದುಕೊಂಡಿದ್ದರೆ, ಅದು ಸಫಲವಾಗುವುದಿಲ್ಲ. ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ, ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಪಡಿಸಿದರು.

ಹುಣಸೂರು ಮತ್ತು ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದಿಂದ ಸಮರ್ಥ ಅಭ್ಯರ್ಥಿಗಳನ್ನೇ ನಿಲ್ಲಿಸುತ್ತೇವೆ. ಉಪಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆ ನಡೆಯಲಿ. ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದೊಂದಿಗೆ ಉಪಚುನಾವಣೆಗಳಲ್ಲಿ ಮೈತ್ರಿ ಏರ್ಪಡಿಸಿಕೊಳ್ಳುವ ಸಂಬಂಧ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವರ ಜೊತೆ ಚರ್ಚೆ ನಡೆಸಿದ ಬಳಿಕ ಮೈತ್ರಿ ಮುಂದುವರೆಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಪಕ್ಷ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ತಿಳಿಸಿದರು.

ಎರಡೂ ಪಕ್ಷಗಳ ನಡುವೆ ಮೈತ್ರಿ ಮುಂದುವರೆಸುವ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಆ ನಾಯಕರು ಒಂದು ನಿರ್ಧಾರಕ್ಕೆ ಬಂದಲ್ಲಿ ಅದಕ್ಕೆ ತಮ್ಮ ಸಹಮತವೂ ಇದೆ ಎಂದು ಅವರು ತಿಳಿಸಿದರು.

ಇಂದು ನಾನು ಹುಣಸೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದೇನೆ. ಈ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ಹುಣಸೂರಿನ ಹಳೆಸ್ನೇಹಿತರ ಜೊತೆ ಮಾತುಕತೆ ನಡೆಸಿದ್ದೇನೆ. ಈ ಬಾರಿ ಅವರು, ನನಗೆ ಉತ್ತಮ ಸಲಹೆ ನೀಡಿದ್ದಾರೆ. ಪ್ರತಿಬಾರಿ ಈ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತೀರಿ. ಅವರನ್ನು ಗೆಲ್ಲಿಸಿಕೊಡುತ್ತೇವೆ. ಕೊನೆಗೆ ಅವರು ಪಕ್ಷದ್ರೋಹ ಮಾಡಿ ಹೊರಗೆ ಹೋಗುತ್ತಾರೆ. ಈ ಬಾರಿ ಸ್ಥಳೀಯರನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಅಭ್ಯರ್ಥಿ ಆಯ್ಕೆ ಬಗ್ಗೆ ಗಮನಹರಿಸುವುದಾಗಿ ಹೇಳಿದರು.

ಕೆಲನಾಯಕರು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಆಯ್ಕೆ ಮಾಡಿ ಗೆಲ್ಲಿಸಿಕೊಡುತ್ತೇವೆ. ನೀವು ಸಂಸದರಾಗಿ ಎಂದೂ ಕೂಡ ಹೇಳಿದ್ದಾರೆ. ಆದರೆ ನಾನು ಮನೆಯಲ್ಲಿಯೇ ಕುಳಿತುಕೊಂಡು ಪಕ್ಷ ಕಟ್ಟುತ್ತೇನೆ ಎಂದು ಅವರಿಗೆ ಬುದ್ಧಿವಾದ ಹೇಳಿದ್ದೇನೆ ಎಂದರು.

ಕೆ.ಆರ್. ಪೇಟೆ ಮತ್ತು ಹುಣಸೂರು ಎರಡೂ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಯಕರ್ತರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ. ಇದನ್ನು ತಾವು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು.

ಬಾಕ್ಸ್ – 1
ನಾನು ಮಾಜಿ ಪ್ರಧಾನಿ
ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ನನಗೂ ಆಹ್ವಾನ ಬಂದಿತ್ತು. ಆದರೆ ನಾನು ಮಾಜಿ ಪ್ರಧಾನಿ ಆಗಿರುವುದರಿಂದ ಸಭೆಯಲ್ಲಿ ಭಾಗವಹಿಸಲಿಲ್ಲ. ಆದರೆ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು, ಕಾರ್ಯಕರ್ತರು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಈ ಬಗ್ಗೆ ಯಾವುದೇ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ಯಾವಾಗ ನಿಲ್ಲಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು. ಅವರು ಜಾರಿ ನಿರ್ದೇಶನಾಲಯದ ತನಿಖೆಗೆ ಯಾವುದೇ ಅಸಹಕಾರ ತೋರಿಲ್ಲ. ತಂದೆಯ ಪುಣ್ಯಕಾರ್ಯಕ್ಕೂ ಹೋಗಲು ಬಿಡದಿರುವುದು ನನ್ನ ಮನಸ್ಸಿಗೆ ನೋವು ತಂದಿದೆ.
– ಹೆಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ.

Leave a Comment