ಉಪಸಮರ ಕೈ ರಣತಂತ್ರ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ನ. ೧೧- ಮುಂಬರುವ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಚುನಾವಣೆಯಲ್ಲಿ ಗೆಲುವಿನ ರಣತಂತ್ರ ರೂಪಿಸುವ ಕುರಿತಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇಂದು ಸಮಾಲೋಚನೆ ನಡೆಸಿದರು.
ಕೆಪಿಸಿಸಿ ಕಛೇರಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಚುನಾವಣೆಯಲ್ಲಿ ಗೆಲುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
15 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಖೈರುಗೊಂಡಿದ್ದು, ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿದ್ದರಾಮಯ್ಯ ರವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ರಾಜ್ಯಸಭಾ ಸದಸ್ಯ ರಹೀಂ ಖಾನ್, ಮಾಜಿ ಸಂಸದರಾದ ಧೃವನಾರಾಯಣ್, ಕೆ.ಎಚ್.ಮುನಿಯಪ್ಪ, ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ರಮೇಶ್ ಕುಮಾರ್, ಕೆ.ಜೆ.ಜಾರ್ಜ್ ಮತ್ತಿತರ ನಾಯಕರೊಂದಿಗೆ ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದರು.
ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದ್ದು ಪಕ್ಷದ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ರವರು ಸಭೆಯಲ್ಲಿ ಉಳಿದ 7 ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ನಾಯಕರಿಗೆ ಸ್ವತಂತ್ರವನ್ನು ನೀಡಿದ್ದರು ಎನ್ನಲಾಗಿದೆ.
ನಿಮಗೆ ಯಾವ ಕ್ಷೇತ್ರದ ಉಸ್ತುವಾರಿ ಬೇಕು ತೆಗೆದುಕೊಳ್ಳಿ, ಆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಗೆಲ್ಲಿಸಿಕೊಂಡು ಬನ್ನಿ ಎಂದು ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಅವರಿಗೆ ಆಹ್ವಾನ ನೀಡುವ ಮೂಲಕ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಸಭೆಯಲ್ಲಿ ಮೂಲ ಕಾಂಗ್ರೆಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಅವರು ನಮಗಿಂತ ಕಿರಿಯರು ನಮಗೆ ಸಲಹೆಕೊಡುತ್ತಾರೆ. ಅವರ ಮಾತನ್ನು ಕೇಳಬೇಕಾ ಎಂದು ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧವೇ ಹರಿಹಾಯ್ದಿದ್ದಾರೆ.

Leave a Comment