ಉಪರಾಷ್ಟ್ರಪತಿ ಸ್ಥಾನ ದ. ಭಾರತದವರಿಗೆ ಮಣೆ

ನವದೆಹಲಿ, ಜು. ೧೭- ರಾಷ್ಟ್ರಪತಿ  ಚುನಾವಣೆ ಮುಗಿದ ಬೆನ್ನಲ್ಲೇ  ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿರುವ ಬಿಜೆಪಿ ದಕ್ಷಿಣ ಭಾರತದವರಿಗೆ ಮಣೆ ಹಾಕಲು ನಿರ್ಧರಿಸಿದೆ. ಈ ಸಂಬಂಧ ಸಂಜೆ ದೆಹಲಿಯ ಬಿಜೆಪಿಯ ಸಂಸದೀಯ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಅಭ್ಯರ್ಥಿ ಆಖೈರು ಮಾಡುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕದ ವಿಧಾನಪರಿಷತ್ತು ಸಭಾಪತಿಯಾಗಿರುವ ಡಿ.ಎಚ್. ಶಂಕರ್‌ಮೂರ್ತಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ. ನಾಮಪತ್ರ ಸಲ್ಲಿಸಲು ನಾಳೆ ಕಡೆ ದಿನವಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜಿಪಿ ನಿರ್ಧರಿಸಿದೆ.

ರಾಜ್ಯದ ಇನ್ನೊಬ್ಬ ಹಿರಿಯ ಮುಖಂಡ ಬಸವರಾಜ ಪಾಟೀಲ್ ಸೇಡಂ ಅವರ ಹೆಸರು ಈ ಹಿಂದೆ ಕೇಳಿ ಬಂದಿತ್ತು. ಇದೀಗ ಶಂಕರಮೂರ್ತಿಯ ಹೆಸರು ಮುಂಚೂಣಿಗೆ ಬಂದಿದೆ. ಸಂಜೆ ಅಭ್ಯರ್ಥಿ ಆಖೈರು ಮಾಡುವುದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.

ನಾಯ್ಡು, ರಾವ್ ಹೆಸರು ಪರಿಗಣನೆ

ಕೇಂದ್ರ ಸಚಿವ ವೆಂಕಯ್ಯ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರ ಹೆಸರು ಕೂಡ ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿದೆ. ರಾಜ್ಯಸಭೆಯ ಕಲಾಪವನ್ನು ಸುಸೂತ್ರವಾಗಿ ನಡೆಸುವ ಜೊತೆಗೆ ಆರ್.ಎಸ್.ಎಸ್. ಸಿದ್ಧಾಂತಕ್ಕೆ ಬದ್ಧರಾಗಿರುವುದು. ಪಕ್ಷಕ್ಕಾಗಿ ದುಡಿದವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿಷಾ ಮುಂದಾಗಿದ್ದಾರೆ.

`ಉಷಾ`ಪತಿ ಅಷ್ಟೇ
ರಾಷ್ಟ್ರಪತಿ ಆಗುವ ಇಲ್ಲವೇ ಉಪರಾಷ್ಟ್ರಪತಿ ಆಗುವ ಯಾವುದೇ ಉದ್ದೇಶವಿಲ್ಲ. ನಾನು `ಉಷಾ`ಪತಿ. ಹೀಗಾಗಿ ಹೆಮ್ಮೆಯಿದೆ ಎಂದು ಹೇಳುವ ಮೂಲಕ ಉಪರಾಷ್ಟ್ರಪತಿ ಆಕಾಂಕ್ಷಿ ತಾವಲ್ಲ ಎನ್ನುವುದನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ. ಉಪರಾಷ್ಟ್ರಪತಿ ಸ್ಥಾನಕ್ಕೆ ನಿಮ್ಮನ್ನು ಆಯ್ಕೆ ಮಾಡುತ್ತಾರಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗೆ ವೆಂಕಯ್ಯನಾಯ್ಡು ಮೇಲಿನಂತೆ ಉತ್ತರಿಸಿದರು.

Leave a Comment