ಉಪನ್ಯಾಸಕನಿಂದ ವಿದ್ಯಾರ್ಥಿಗೆ ಹಲ್ಲೆ

ಪುತ್ತೂರು, ಸೆ.೧೨- ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯೊಬ್ಬನ ಕೆನ್ನೆ ಮತ್ತು ತಲೆಗೆ ಕೈಯಿಂದ ಬಾರಿಸಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಪುತ್ತೂರಿನ ಕಾಲೇಜೊಂದರಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ವರ್ಷದ ಡಿಪ್ಲೋಮ ವಿದ್ಯಾರ್ಥಿ, ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಕೊಡಾಜೆ ನಿವಾಸಿ ಮಹಮ್ಮದ್ ಶರೀಫ್ ಅವರ ಪುತ್ರ ಮಹಮ್ಮದ್ ಮನ್ಸೂರ್ (೧೮) ಹಲ್ಲೆಗೊಳಗಾದ ವಿದ್ಯಾರ್ಥಿ.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಥಮ ಇಂಟರ‍್ನಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳಿಗೆ ೨ ಸಲ ಉತ್ತರ ಬರೆದುಕೊಂಡು ಬರುವಂತೆ ಕಾಲೇಜಿನ ಉಪನ್ಯಾಸಕ ಶಿವಪ್ರಸಾದ್ ಅವರು ವಾರದ ಹಿಂದೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ನಿನ್ನೆ ಮೊದಲ ತರಗತಿ ಅವಧಿಯಲ್ಲಿ ಉಪನ್ಯಾಸಕ ಶಿವಪ್ರಸಾದ್ ಅವರು ತರಗತಿಗೆ ಬಂದು ಈ ಹೋಂ ವರ್ಕ್ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ್ದರು. ತಾನು ಹೋಂ ವರ್ಕ್ ಮಾಡಿರಲಿಲ್ಲ. ಈ ಕಾರಣಕ್ಕಾಗಿ ಅವರು ತನ್ನ ಕೆನ್ನೆ ಮತ್ತು ತಲೆಯ ಭಾಗಕ್ಕೆ ೫ ಬಾರಿ ಕೈಯಿಂದ ಬಾರಿಸಿ ಹಲ್ಲೆ ನಡೆಸಿದ್ದಾರೆ. ತರಗತಿ ಅವಧಿಯ ಬಳಿಕ ತಲೆಸುತ್ತಿದಂತಾಗಿ ತರಗತಿ ಹೊರಗಡೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದ ತನ್ನನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಬ್ಬರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ಮಹಮ್ಮದ್ ಮನ್ಸೂರ್ ಅವರು ಆರೋಪಿಸಿದ್ದಾರೆ.
ಮಹಮ್ಮದ್ ಮನ್ಸೂರ್ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಮೇಲೆ ಹಲ್ಲೆ ನಡೆಸಿರುವ ಉಪನ್ಯಾಸಕ ಶಿವಪ್ರಸಾದ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment