ಉಪಚುನಾವಣೆ ಬಳಿಕ ಬಿಜೆಪಿಗೆ ಸಂಕಷ್ಟ:ಸಿದ್ದರಾಮಯ್ಯ

ಮೈಸೂರು, ನ 16- ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಎಂಟು ಸ್ಥಾನಗಳನ್ನೂ ಸಹ ಗೆಲ್ಲುವುದಿಲ್ಲ. ಚುನಾವಣೆ ಬಳಿಕ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾ ಬಲ ಕುಸಿಯಲಿದ್ದು, ಯಡಿಯೂರಪ್ಪ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಿಯೇ ಅಕ್ರಮಗಳ ಮೂಲಕ ಚುನಾವಣೆ ಗೆಲ್ಲಲು ಯಡಿಯೂರಪ್ಪ ಸಜ್ಜಾಗಿದ್ದು, ಇದಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದದಾರೆ ಎಂದರು.

ಹುಣಸೂರಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಭಾವಚಿತ್ರ ಇರುವ  ಸಾವಿರಾರು ಸೀರೆಗಳು ಸಿಕ್ಕಿವೆ. ಇದೆಲ್ಲಾ ಚುನಾವಣಾ ಅಕ್ರಮಕ್ಕೆ ಸಾಕ್ಷಿ. ಅನರ್ಹರೆಲ್ಲ ತ್ಯಾಗಿಗಳಲ್ಲ, ಅವರು ಸ್ವಾರ್ಥಿಗಳು ಎಂದು ಕುಟುಕಿದರು.

ಅಪರೇಷನ್ ಕಮಲ ಆಡಿಯೋ ಬಹಿರಂಗ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರೇ‌ ಇದೀಗ ಸತ್ಯ ಬಾಯಿ ಬಿಡುತ್ತಿದ್ದಾರೆ. ಜನರಿಗೆ ಅದು ಈಗ ಅರ್ಥವಾಗುತ್ತಿದೆ. ಅನರ್ಹರು ಅನರ್ಹರ ಹಣೆಪಟ್ಟಿ ಹೊತ್ತುಕೊಂಡೇ ಜನರ ಮುಂದೆ ಹೋಗಬೇಕು. ಅವರಿಗಂಟಿರುವ ಅನರ್ಹರ ಪಟ್ಟ  ಯಾವುದೇ ಕಾರಣಕ್ಕೂ ಹೋಗಲು ಸಾಧ್ಯವಿಲ್ಲ. ರಮೇಶ್ ಜಾರಕಿಹೋಳಿ ಮಾತುಗಳಿಗೆ ಕಿಮ್ಮತ್ತಿಲ್ಲ‌. ಅನರ್ಹರಾಗಿರುವ ಕಾರಣ ಅವರು ಬಾಯಿಗೆ ಬಂದಂತೆ‌ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ಅನರ್ಹ ಶಾಸಕರು ತ್ಯಾಗಿಗಳಲ್ಲ.ಅವರು‌ ದೇಶದ ಸ್ವಾತಂತ್ರ ಹೋರಾಟಕ್ಕೆ ತ್ಯಾಗ ಮಾಡಿಲ್ಲ. ಮಾಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ. ಇವರೆಲ್ಲಾ ದೇಶಕ್ಕಾಗಿ ತಮ್ಮ ಸ್ವಾರ್ಥವನ್ನು ತ್ಯಾಗ ಮಾಡಿದ್ದಾರೆ ಎಂದರು.

ಅನರ್ಹರಿಗೆ ಸಚಿವ ಸ್ಥಾನ ನೀಡುವ ಕುರಿತು ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ  ಸಿದ್ದರಾಮಯ್ಯ, ಹೀಗೆ ಹೇಳಿ ಯಡಿಯೂರಪ್ಪ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣಾ ಆಯೋಗ ಮುಖ್ಯಮಂತ್ರಿ ಮೇಲೆ ಕ್ರಮ ಕೈಗೊಳ್ಳಬೇಕು. ಬಿಜೆಪಿಗೂ ಚುನಾವಣಾ ಸಂಹಿತೆ ಅನ್ವಯವಾಗುತ್ತದೆ. ಅಕ್ರಮಗಳಿಂದಲೇ ಬಿಜೆಪಿ ಚುನಾವಣೆ ಎದುರಿಸಲು ಸಜ್ಜಾಗಿದೆ. ರಾಣೆಬೆನ್ನೂರು ಅನರ್ಹ ಶಾಸಕ ಶಂಕರ್‌ಗೆ ಮೇಲ್ಮನೆ‌ ಸ್ಥಾನ ನೀಡಿ ಮಂತ್ರಿ ಮಾಡುವುದಾಗಿ ಖುದ್ದು ಯಡಿಯೂರಪ್ಪ ಅವರೇ ಹೇಳುತ್ತಾರೆ. ಇಂತವರೆಲ್ಲ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಅರ್ಹರಲ್ಲ ಎಂದು ಕಿಡಿಕಾರಿದರು.

 

Leave a Comment