ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲ: ಕೋಟ

ಉಡುಪಿ, ನ.೮- ಅನರ್ಹ ಶಾಸಕರ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ಬಿಜೆಪಿ ಅವರನ್ನು ಬಹಳ ಗೌರವಿಸುತ್ತದೆ. ಅವರ ಮಗ ಕುಮಾರಸ್ವಾಮಿಯವರಿಗೆ ಅದೇ ಗೌರವ ನಮ್ಮಿಂದ ಸಿಗುತ್ತದೆ. ಆದರೆ ಉಪಚುನಾವಣೆಯಲ್ಲಿ ನಮ್ಮ ನಡುವೆ ಹೊಂದಾಣಿಕೆ ಇಲ್ಲ. ಸರಕಾರ ಉಳಿಸಲು ಜೆಡಿಎಸ್ ಸಹಾನುಭೂತಿ ತೋರಿಸಿದೆ ಅದಕ್ಕೆ ಧನ್ಯವಾದಗಳು. ಎಲ್ಲ ೧೫ ಕ್ಷೇತ್ರದಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ, ಅತ್ಯಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಸಿದ್ದರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡುವುದೇ ಸಿದ್ದರಾಮಯ್ಯನವರ ಕೆಲಸ. ನಾವು ಹೇಳಿದಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದೇವೆ. ಟಿಪ್ಪು ಪಠ್ಯ ರದ್ದು ಅದರ ಮುಂದುವರಿದ ಭಾಗ. ಈಗಿನ ತಲೆಮಾರಿಗೆ ಟಿಪ್ಪು ನ್ಯೂನತೆ ಕಂಡಿದೆ. ಮಡಿಕೇರಿ ಶಾಸಕರೊಬ್ಬರು ಟಿಪ್ಪು ಪಠ್ಯ ರದ್ದು ಮಾಡಲು ಮನವಿ ಮಾಡಿದ್ದರು. ಅವರ ಮನವಿ ಪರಿಶೀಲಿಸುವುದಾಗಿ ಶಿಕ್ಷಣ ಸಚಿವರು ಹಾಗೂ ಸಿಎಂ ಭರವಸೆ ನೀಡಿದ್ದಾರೆ ಎಂದರು. ಈಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಸ್ವಪಕ್ಷೀಯರನ್ನು ಬಿಟ್ಟು ತಾಳ್ಮೆ ಕಳೆದುಕೊಂಡು ಮಾತನಾಡುವ ಅವರ ಮುನ್ನುಗ್ಗುವ ಗುಣವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು. ದೇವರ ಹೆಸರಿನ ಮದ್ಯದಂಗಡಿಗಳಿಗೆ ಮರು ನಾಮಕರಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯದಂಗಡಿಗೆ ದೇವರ ಹೆಸರು ಇಡುವುದು ಆಭಾಸವಾಗುತ್ತದೆ. ಹೀಗಾಗಿ ಬಾರ್, ವೈನ್ ಶಾಪ್ ಗಳಿಗೆ ದೇವರ ಹೆಸರಿಗೆ ಜನರಿಂದ ವಿರೋಧ ಬಂದಿದೆ. ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಕ್ಕೆ ಅಧಿಕಾರಿಗಳಿಂದ ಕಡತ ಸಿದ್ಧಪಡಿಸಲು ಸೂಚಿಸಿದ್ದೇನೆ. ಅಬಕಾರಿ ಮತ್ತು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಲು ಸೂಚನೆ ನೀಡಿದ್ದೇನೆ. ಈ ಕುರಿತು ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇದೆ. ಸಾರ್ವಜನಿಕ ಅಭಿಪ್ರಾಯಕ್ಕೂ ಅವಕಾಶ ಇದೆ. ಅಭಾಸ ಹೆಸರು ಬದಲಿಸುವ ಚಿಂತನೆ ಮುಜರಾಯಿ ಇಲಾಖೆ ಮುಂದಿದೆ ಎಂದರು. ಬಾರ್ ಒಳಗೆ ದೇವರ ಫೋಟೋ ಇಡಬೇಡಿ ಎಂದಿಲ್ಲ. ದೇವರ ಹೆಸರಿರುವವರು ಕುಡಿಯಬಹುದಾ ಎಂದು ನೀವು ಪ್ರಶ್ನೆ ಮಾಡಬಹುದು? ದೇವರ ಹೆಸರು ಇರುವವರು ಮದ್ಯದಂಗಡಿಯಿಂದ ವಾಪಸ್ ಕಳುಹಿಸಬೇಕು ಎಂಬ ಅಭಿಪ್ರಾಯ ಇದೆ. ಸರಕಾರ ಈ ವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಬಕಾರಿ, ಕಾನೂನು ಇಲಾಖೆ ಒಪ್ಪದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಲ್ಲ, ಹೈಕಮಾಂಡ್ ನಿಂದ ರಾಜ್ಯ ಸರಕಾರದ ಸಾಧನೆ ಕುರಿತು ಪರಾಮರ್ಶೆ ನಡೆಸುತ್ತಿದೆ. ರಾಜ್ಯ ಸರಕಾರದ ನೂರು ದಿನದ ಸಾಧನೆ ಜನತೆ ಮುಂದಿಟ್ಟಿದ್ದೇವೆ. ನೆರೆಯ ವಾತಾವರಣವನ್ನು ನಿಭಾಯಿಸಿದ್ದೇವೆ. ಕೇಂದ್ರ ಸರಕಾರ ಸಹ ನಮ್ಮ ಕೆಲಸವನ್ನು ಗಮನಿಸುತ್ತದೆ. ನೀವು ಎಷ್ಟು ಕೆಲಸ ಮಾಡಿದ್ದೀರಿ ಎಮದು ಕೇಳಿದರೆ ತಪ್ಪೇನು? ಹೈಕಮಾಂಡ್ ಸಮೀಕ್ಷೆ ಮಾಡಿದ್ದರೆ ತಪ್ಪೇನು? ನಮ್ಮನ್ನು ಗಮನಿಸುತ್ತಿದ್ದರೆ ನಾವು ಚೆನ್ನಾಗಿ ಕೆಲಸ ಮಾಡಬಹುದು. ಪಾಸು- ಫೇಲಿನ ಪಟ್ಟಿ ನಮ್ಮಲ್ಲಿಲ್ಲ, ಫೇಲ್ ಆಗುವ ವಿದ್ಯಾರ್ಥಿಗಳು ನಮ್ಮಲ್ಲಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Comment