ಉನ್ನಿಕೃಷ್ಣನ್ ಹತ್ಯೆ ಪ್ರಕರಣ

ಇಬ್ಬರ ಬಂಧನ
ಉಪ್ಪಿನಂಗಡಿ, ಸೆ.೮- ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎರ್ನಾಕುಲಂ ಜಿಲ್ಲೆಯ ಉನ್ನಿಕೃಷ್ಣನ್ ಎಂಬಾತನ ಹತ್ಯೆ ಪ್ರಕರಣವನ್ನು ಭೇದಿಸಿರುವ ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಅಳುವದ ಕಂಬಿನಿಪ್ಪಡಿ ಕೊಟ್ಟಕ್ಕಾಕಾತ್ ಮನೆಯ ಔರಂಗಜೇಬ್ (೩೭) ಹಾಗೂ ಪಾಲಕ್ಕಾಡು ಜಿಲ್ಲೆಯ ಅಲೆತ್ತೂರು ತಾಲೂಕಿನ ಚುಂದಕಾಡು ಕಾವಶ್ಯೇರಿ ಗ್ರಾಮದ ಕೊಕ್ರತ್ತಲ್ ನಿವಾಸಿ ಮುಹಮ್ಮದ್ ಶನವಾಝ್(೨೩) ಬಂಧಿತ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳಾದ ಅಪ್ಪುಯಾನೆ ಉನ್ನಿ, ಸುಹೈಲ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಎರ್ನಾಕುಲಂ ನಿವಾಸಿಯಾಗಿದ್ದ ಉನ್ನಿಕೃಷ್ಣನ್ ರೌಡಿಯಾಗಿದ್ದು, ಆತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ೧೬ ಪ್ರಕರಣಗಳು ದಾಖಲಾಗಿವೆ. ಈತ ಸ್ಥಳೀಯ ಇನ್ನೋರ್ವ ರೌಡಿ ಅನಸ್ ಎಂಬಾತನ ನೇತೃತ್ವದ ತಂಡದಲ್ಲಿದ್ದನು. ಅನಸ್ ದ.ಕ. ಜಿಲ್ಲೆಯಲ್ಲೂ ಜಾಗದ ವ್ಯವಹಾರ ಹೊಂದಿದ್ದನು. ಜಾಗದ ವ್ಯವಹಾರಕ್ಕೆ ಸಂಬಂಧಿಸಿದ ಬಾಕಿ ಹಣ ವಸೂಲಾತಿಗಾಗಿ ಆ.೩೦ರಂದು ಉನ್ನಿಕೃಷ್ಣನ್ ತಂಡದ ಇತರ ಸದಸ್ಯರಾದ ಔರಂಗಜೇಬ್, ಅಪ್ಪು, ಮುಹಮ್ಮದ್ ಶನವಾಝ್ ಹಾಗೂ ಸುಹೈಲ್‌ರೊಂದಿಗೆ ಉಪ್ಪಿನಂಗಡಿಗೆ ಆಗಮಿಸಿದ್ದ. ಅಲ್ಲಿಂದ ಸೆ.೧ರಂದು ರಾತ್ರಿ ಇವರು ಕಾರಿನಲ್ಲಿ ನೆಲ್ಯಾಡಿಯತ್ತ ತೆರಳಿದ್ದರು. ಈ ಸಂದರ್ಭ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿದ್ದ ಉನ್ನಿಕೃಷ್ಣನ್‌ನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು, ಚೂರಿಯಿಂದ ತಿವಿದು ಕೊಲೆಗೈಯಲಾಗಿದೆ. ಬಳಿಕ ಮೃತದೇಹವನ್ನು ಕಪ್ಪೆಟ್ಟಿ ಸೇತುವೆಗಿಂತ ಸ್ವಲ್ಪ ಮುಂದೆ ಹೊಳೆಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಪ್ಪೆಟ್ಟಿ ಹೊಳೆಯಲ್ಲಿ ಹೊಳೆಯಲ್ಲಿ ಪತ್ತೆಯಾದ ಮೃತದೇಹದ ಅಂಗಿಯ ಜೇಬಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಆಧಾರದಲ್ಲಿ ಉನ್ನಿಕೃಷ್ಣನ್‌ನ ಗುರುತು ಪತ್ತೆಯಾಗಿತ್ತು. ಮೃತದೇಹದಲ್ಲಿ ಗಾಯದ ಗುರುತು ಕಂಡುಬಂದಿದ್ದರಿಂದ ಉನ್ನಿಕೃಷ್ಣನ್ ಮನೆಯವರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ಸೆ.೬ರಂದು ಕಾಸರಗೋಡಿನಿಂದ ವಶಕ್ಕೆ ತೆಗೆದುಕೊಂಡ ಪೊಲೀಸರು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸ್ಥಳ ಮಹಜರು ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿಸಿಐಬಿ ಪೊಲೀಸ್ ನಿರೀಕ್ಷಕ ಸುನೀಲ್ ವೈ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ತಂಡದಲ್ಲಿ ಸಿಬ್ಬಂದಿ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಇಕ್ಬಾಲ್ ಎ.ಇ., ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಉದಯ ಗೌಡ, ಪ್ರವೀಣ ರೈ ಮತ್ತು ಸುರೇಶ್ ಪೂಜಾರಿ ಭಾಗವಹಿಸಿದ್ದಾರೆ. ಈ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ.

Leave a Comment