ಉನ್ನತ ಶಿಕ್ಷಣದತ್ತ ಒಲವು ತೋರಿ: ಸಚಿವೆ ಜಯಮಾಲಾ

ಮಂಗಳೂರು, ಆ.೬- ಕರಾವಳಿಯ ವಿದ್ಯಾರ್ಥಿಗಳು ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳು ನಿರೀಕ್ಷೆಗೂ ಮೀರಿದ ಸಾಧನೆ ಮಾಡುತ್ತಿದ್ದಾರೆ. ಆ ಬಳಿಕ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಷ್ಟೇ ಉನ್ನತ ಶಿಕ್ಷಣ ಪ್ರವೇಶ ಪಡೆಯುತ್ತಿದ್ದಾರೆ. ಹಾಗಾಗಿ ಯುವ ಜನತೆ ಉನ್ನತ ಶಿಕ್ಷಣದತ್ತ ಹೆಚ್ಚು ಒಲವು ತೋರಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲಾ ಹೇಳಿದರು.
ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ರವಿವಾರ ಜರುಗಿದ ಯುವ ವಾಹನಿ ಕೇಂದ್ರ ಸಮಿತಿ ಮಂಗಳೂರು ಇದರ ೩೧ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಯುವ ಜನತೆಯು ಐಎಎಸ್, ಐಪಿಎಸ್ ಅಧಿಕಾರಿ ಸ್ಥಾನವೇರುವುದನ್ನು ಕಾಣಲು ಮನಸು ಹಾತೊರೆಯುತ್ತಿದೆ ಎಂದ ಸಚಿವೆ ಜಯಮಾಲಾ ಸಮಾಜದಲ್ಲಿ ಯುವಶಕ್ತಿಯ ನಾಯಕತ್ವವನ್ನು ಮೊದಲ ಬಾರಿಗೆ ನೀಡಿದವರು ಕೋಟಿ- ಚೆನ್ನಯರು. ಒಂದು ಕಾಲದಲ್ಲಿ ಬಿಲ್ಲವ ಸಮಾಜದ ಜನರು ತೆಂಗಿನ ಗೆರಟೆಯಲ್ಲಿ ನೀರು ಕುಡಿಯುವ ಪದ್ಧತಿ ಇತ್ತು. ಸಮಾಜದ ಹೆಣ್ಣು ಮಕ್ಕಳು ರವಿಕೆ ತೊಡುವ ಹಾಗಿರಲಿಲ್ಲ. ಇಂತಹ ಅನಿಷ್ಠ ಪದ್ಧತಿಯಿಂದ ಸಮಾಜವನ್ನು ವಿಮೋಚನೆಗೊಳಿಸಿ ಸ್ವಾಭಿಮಾನದ ಬದುಕು ನೀಡಿದವರು ನಾರಾಯಣ ಗುರುಗುಳು ಮತ್ತು ಯುವಜನರಿಗೆ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಬದುಕು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು ಎಂದರು. ನಾರಾಯಣಗುರು ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮವು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲಾಮಟ್ಟದಲ್ಲಿ ಕೂಡ ಉತ್ತಮ ರೀತಿಯಲ್ಲಿ ವ್ಯವಸ್ಥೆಗೊಳಿಸುವಂತೆ ಸಚಿವೆ ಜಯಮಾಲಾ ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ, ಮಂಗಳೂರಿನಲ್ಲಿ ೨೦೦೪ರಲ್ಲಿ ನಡೆದ ಬಿಲ್ಲವ ಮಹಿಳೆಯರ ಪ್ರಥಮ ಸಮಾವೇಶದಲ್ಲಿ ಬಿಲ್ಲವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯಕ್ಕೆ ಒತ್ತಾಯಿಸಲಾಗಿತ್ತು. ಬಿಲ್ಲವ ಮಹಿಳೆಯು ಇದೀಗ ಪ್ರಥಮ ಬಾರಿಗೆ ಸಚಿವೆಯಾಗುವ ಮೂಲಕ ಹಳೇ ಬೇಡಿಕೆ ಸಾಕಾರಗೊಂಡಿದೆ ಎಂದರು. ನಾರಾಯಣಗುರು ಎಜುಕೇಶನ್‌ಟ್ರಸ್ಟ್ ಅಧ್ಯಕ್ಷ ಸಾದು ಪೂಜಾರಿ ಕುಳಾಯಿಗೆ ಸಾಧನಶ್ರೀ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸಾಧನಾ ಶ್ರೇಷ್ಠ, ರವಿ ಕಕ್ಯೆಪದವು (ಸಾಮಾಜಿಕ), ಸಂಪತ್ ಬಿ.ಸುವರ್ಣ ಬೆಳ್ತಂಗಡಿ (ಸಾಂಸ್ಕೃತಿಕ) ಹಾಗೂ ಡಾ.ಮುರಳೀಕೃಷ್ಣ ಮೂಡುಬಿದಿರೆ (ಸಂಘಟನೆ) ಅವರಿಗೆ ಯುವ ಸಾಧನಾ ಪ್ರಶಸ್ತಿ-ಪುರಸ್ಕಾರ ಪ್ರದಾನ ನಡೆಯಿತು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು. ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಸಮಾವೇಶದ ಸಂಚಾಲಕ ನವೀನ್‌ಚಂದ್ರ, ನಿರ್ದೇಶಕ ಹರೀಸ್ ಕೆ. ಪೂಜಾರಿ ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ಮತ್ತು ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Comment