ಉದ್ಯೋಗ ಖಾತ್ರಿ ಯೋಜನೆ : ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕೆ.ಆರ್.ಪೇಟೆ,ಜೂ.14: ಪಟ್ಟಣ ವ್ಯಾಪ್ತಿಯ ಹಿಡುವಳಿ ಭೂಮಿಯಲ್ಲಿ ತಾಲೂಕಿನ ಅಗ್ರಹಾರಬಾಚಹಳ್ಳಿ ಪಂಚಾಯಿತಿಯವರು ಕುಡಿಯುವ ನೀರಿನ ಕೊಳವೆ ಬಾವಿ ಕೊರೆಸಿ ಮತ್ತು ಇಂಗುಗುಂಡಿ ನಿರ್ಮಾಣ ಮಾಡಿರುವುದರಿಂದ ಭೂಮಿಯ ರೈತರು ಉಳುಮೆ ಮಾಡಲು ತೊಂದರೆಯಾಗಿದೆ ಎಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಕೃಷ್ಣರಾಜಪೇಟೆ ಪಟ್ಟಣದ ಎಲ್ಲೆಗೆ ಸೇರಿದ ಸರ್ವೆ ನಂ.145, 146, 147ರಲ್ಲಿರುವ ಜಮೀನಿಗೆ ಹೊಂದಿಕೊಂಡಂತೆ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಸಹಳ್ಳಿ ಗ್ರಾಮದ ಎಲ್ಲೆಯ ಗಡಿ ಇದೆ. ಹಾಗಾಗಿ ಚಿಕ್ಕೋಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಯವರು ಪಂಚಾಯಿತಿ ಗಡಿ ದಾಟಿ, ಪಟ್ಟಣ ವ್ಯಾಪ್ತಿಯ ಲಕ್ಷ್ಮಮ್ಮ, ರಾಮೇಗೌಡ, ಚಿಕ್ಕೇಗೌಡ ಮತ್ತಿತರರಿಗೆ ಸೇರಿದ ಹಿಡುವಳಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಇಂಗು ಗುಂಡಿ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿಕೊಟ್ಟಿದ್ದಾರೆ ಇದರಿಂದ ರೈತರು ತಮ್ಮ ಭೂಮಿ ಉಳುಮೆ ಮಾಡಲು ತೊಂದರೆಯಾಗಿದೆ ಎಂದು ಜಮೀನಿನ ಮಾಲೀಕರು ಆದ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಆರೋಪ ಮಾಡಿದರು. ಅಲ್ಲದೆ ಕೂಡಲೇ ಹಿಡುವಳಿ ಜಮೀನಿನಲ್ಲಿ ಕೊರೆಸಲಾಗಿರುವ ಕೊಳವೆ ಬಾವಿ, ಕುಡಿಯುವ ನೀರಿನ ಟ್ಯಾಂಕ್, ಪಂಪ್‍ಹೌಸ್ ಅನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಕ್ಕೆ ಸ್ಥಳಾಂತರ ಮಾಡಿಕೊಳ್ಳಬೇಕು. ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿ ಮೀರಿ ಕಾಮಗಾರಿ ಮಾಡುವುದರಿಂದ ಸರ್ಕಾರದ ಹಣ ವ್ಯರ್ಥವಾಗುತ್ತದೆ ಇದಕ್ಕೆ ಯಾರು ಹೊಣೆ. ರಾಜಕಾರಣಿಗಳು ಹೇಳುತ್ತಾರೆ ಎಂದು ಕಾನೂನು ಮೀರಿ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಹಾಯಕ ನಿರ್ದೇಶಕಿ ಮೇನಕಾದೇವಿ ಮತ್ತು ಅಗ್ರಹಾರಬಾಚಹಳ್ಳಿ ಪಿಡಿಒ ದೇವೇಗೌಡ ಅವರನ್ನು ಪ್ರಶ್ನಿಸಿದರು.
ಇದಲ್ಲದೆ ನಮ್ಮ ಕುಟುಂಬಕ್ಕೆ ಸೇರಿದ ಹಿಡುವಳಿ ಜಮೀನಿನಲ್ಲಿ ಗುಡಿಸಲು ಮನೆ ಕಟ್ಟಿಕೊಳ್ಳಲು ಕುಮ್ಮಕ್ಕು ನೀಡುತ್ತಿರುವ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಅವರು ಒಂದು ತಿಂಗಳೊಳಗೆ(ಜುಲೈ-12ರೊಳಗೆ) ಗುಡಿಸಲುಗಳನ್ನು ಹಾಗೂ ಗುಡಿಸಲು ಪಕ್ಕದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯ ಮಾಡಿದರು. ಈ ವೇಳೆ ಮಾತನಾಡಿದ ಪಿಡಿಓ ದೇವೇಗೌಡ ಅವರು ಗ್ರಾಮ ಪಂಚಾಯಿತಿಯ ಯಾವುದೇ ಅನುಧಾನದಿಂದ ನೀರಿನ ಟ್ಯಾಂಕ್ ನಿರ್ಮಿಸಿಕೊಟ್ಟಿಲ್ಲ. ಯಾವ ಅನುಧಾನದಿಂದ ಟ್ಯಾಂಕ್ ನಿರ್ಮಿಸಲಾಗಿದೆ ಎಂಬುದರ ಬಗ್ಗೆ ದಾಖಲೆ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಗುಡಿಸಲು ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಕೊಳವೆ ಬಾವಿ, ಪಂಪ್‍ಹೌಸ್ ಅನ್ನು ಪರ್ಯಾಯವಾಗಿ ಪಂಚಾಯಿತಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಿದ ನಂತರ ಸ್ಥಳಾಂತರಕ್ಕೂ ಕ್ರಮ ವಹಿಸಲಾಗುವುದು ಎಂದು ಸಹಾಯಕ ನಿರ್ದೇಶಕಿ ಮೇನಕಾದೇವಿ ಮತ್ತು ಪಿಡಿಓ ದೇವೇಗೌಡ ಅವರು ರೈತರಾದ ಲಕ್ಷ್ಮಮ್ಮ ಮತ್ತು ಪಿಗ್ಮಿ ಶ್ರೀನಿವಾಸ್, ಕೆ.ಸಿ.ಮಂಜುನಾಥ್ ಅವರಿಗೆ ಭರವಸೆ ನೀಡಿದರು.

Leave a Comment