ಉದ್ಯೋಗ ಖಾತ್ರಿ ಯೋಜನೆಯಿಂದ ಸ್ವಾವಲಂಬನೆ ಬದುಕು: ಡಾ. ಖರ್ಗೆ

ಕಲಬುರಗಿ, ಫೆ. 17: :ಬಡವರು ಸ್ವಾವಲಂಬನೆಯಿಂದ ಬದುಕಲಿ ಎಂಬ ಉದ್ದೇಶದಿಂದ ಯುಪಿಎ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ದೇಶದ ಬಡಜನರ ಬದುಕನ್ನು ಹಸನು ಮಾಡಿದೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಇಂದು ತಾಲೂಕಿನ ಸೈಯ್ಯದ್ ಚಿಂಚೋಳಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ವಿಕ್ಷಣೆ ಮಾಡಿ ನಂತರ ಮಾತನಾಡಿದ ಅವರು ನರೇಗಾ ಯೋಜನೆಯ ಮೂಲಕ ಬಡವರಿಗೆ ಕನಿಷ್ಠ 100 ದಿನವಾದರೂ ಉದ್ಯೋಗ ಸಿಗಲಿ ಎಂದು ಯುಪಿಎ ಸರ್ಕಾರ ಜಾರಿಗೆ ತಂದ ಯೋಜನೆಗೆ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಹಣ ನೀಡದೇ ಇರುವುದರಿಂದ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಹಣ ಪಾವತಿಸಲಾಗುತ್ತಿಲ್ಲ ಎಂದು ಟೀಕಿಸಿದರು.
ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಮಾಡುವ ಮೂಲಕ ಬಡವರು, ದುಡಿಯುವ ವರ್ಗಕ್ಕೆ ಕೆಲಸ ಇಲ್ಲದಂತೆ ಮಾಡಿದ್ದಾರೆ. ಮಹಿಳೆಯರು ತಮ್ಮ ಗಂಡಂದಿರಿಂದ ಕದ್ದು ಮುಚ್ಚಿ ಸಂಗ್ರಹಿಸಿ ಇಡುತ್ತಿದ್ದ ಹಣಕ್ಕೂ ಕನ್ನಾ ಹಾಕುವ ಮೂಲಕ ಅವರ ಕೂಡಿಟ್ಟ ಹಣ ಬ್ಯಾಂಕ್ ಪಾಲಾಗುವಂತೆ ಮಾಡಿದ್ದಾರೆ. ಇದರಿಂದಾಗಿ ಹಣವನ್ನು ಚೆಕ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತಂದು ಗೃಹಿಣಿಯರಿಗೆ ಸಂಕಷ್ಟ ತಂದಿದ್ದಾರೆ ಎಂದರು.
ಕಷ್ಟಪಟ್ಟು ಕೆಲಸ ಮಾಡಿ ಸೋಮಾರಿಗಳಾಗಬೇಡಿ, ಇರುವ ಅಲ್ಪ ಸ್ವಲ್ಪ ಜಮೀನನಲ್ಲಿ ದುಡಿಯುವದನ್ನು ರೂಢಿಸಿಕೊಳ್ಳಿ, ಕೆಲಸವಿಲ್ಲದೇ ಇರುವಾಗ ನರೇಗಾದಂತ ಯೋಜನೆಯಲ್ಲಿ ಕೆಲಸ ಮಾಡಿ ಹಣ ಉಳಿತಾಯ ಮಾಡಿ ಎಂದು ಖರ್ಗೆ ಸಲಹೆ ನೀಡಿದರು. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವಾಗಿ ಬಿಡುಗಡೆ ಮಾಡಬೇಕಿರುವ ಹಣವನ್ನು ಬಿಡುಗಡೆ ಮಾಡುವ ಮೂಲಕ ಈ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ಸಿಗುವಂತೆ ಮಾಡಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗನಗೌಡ ಸಂಕನೂರ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿ.ಪಂ.ಸದಸ್ಯೆ ವಿಜಯಲಕ್ಷ್ಮಿ ಹಾಗರಗಿ, ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಲಕ್ಷ್ಮೀಕಾಂತ ಸಾವಳಗಿ, ಮುಖಂಡರಾದ ನೀಲಕಂಠರಾವ ಮೂಲಗೆ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ, ಜಿ.ಪಂ.ಸಿಇಓ ಅನಿರುದ್ದ ಶ್ರವಣ ಪಿ. ಹಾಗೂ ಇತರರಿದ್ದರು.

Leave a Comment