ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಾಭಿವೃದ್ಧಿ ಸಾಧ್ಯ

ಕೊಳ್ಳೇಗಾಲ. ಆ.9: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ನೋಡಲ್ ಅಧಿಕಾರಿ ಶಾಂತರಾಜು ಅಭಿಪ್ರಾಯಪಟ್ಟರು.
ಅವರು ತೆಳ್ಳನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ 2017-18 ನೇ ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗ್ರಾಮದ ಜನತೆ ಕೂಲಿಗಾಗಿ ವಲಸೆ ಹೋಗದೆ ಗ್ರಾಮ ಪಂಚಾಯಿತಿಯಲ್ಲಿ ಕೂಲಿ ಬಯಸಿ ಅರ್ಜಿಯನ್ನು ಹಾಕಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕೆಲಸಗಳನ್ನು ಕೂಲಿಯನ್ನು ಪಡೆಯಬೇಕೆಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕ್ರಿಯೆ ಯೋಜನೆಯನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆ ಚರಂಡಿ ನಿರ್ಮಾಣ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಸಾಮಾಜಿಕ ಪರಿಶೋಧನ ಅಧಿಕಾರಿ ಮನೋಹರ್ ಮಾತನಾಡಿ ರೇಷನ್ ಕಾರ್ಡ್‍ನಂತೆ ಉದ್ಯೋಗ ಚೀಟಿಯನ್ನು ಯಾರಿಗೂ ನೀಡದೆ ಸ್ವತಃ ಕೂಲಿಯನ್ನು ಪಡೆಯಲು ಬಳಸಿಕೊಳ್ಳಬೇಕೆಂದರು. ಕೆಲವೊಂದು ಕಾಮಗಾರಿಗಳ ಆಕ್ಷೇಪಣೆಯನ್ನು ಸಭೆಯ ಮುಂದಿಟ್ಟರು.
ಪಿಡಿಒ ಕಿರಣ್ ಮಾತನಾಡಿ ವಾರ್ಡ್ ಸಭೆಗಳ ಸಂದರ್ಭದಲ್ಲಿ ಗ್ರಾಮಸ್ಥರು ವಾರ್ಡಗಳಲ್ಲಿ ಆಗಬೇಕಾದ ಕೆಲಸಗಳ ಮಾಹಿತಿಯನ್ನು ನೀಡಿದರೆ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಿಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಮಹದೇವಶೆಟ್ಟಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಮುಖಂಡರುಗಳಾದ ಕೆಂಚಪ್ಪ ಮಹೇಶ್ ಮುತ್ತುರಾಜ್ ರಂಗಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Comment