ಉದ್ದೀಪನ ಔಷಧಿ ಸೇವನೆ 2 ಭಾರತೀಯ ಅಥ್ಲೀಟ್‌ಗೆ ಗೇಟ್‌ಪಾಸ್

ಗೋಲ್ಡ್‌ಕೋಸ್ಟ್, ಏ. ೧೩- ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡುತ್ತಿರುವ ಬೆನ್ನಲ್ಲೇ, ಇಬ್ಬರು ಭಾರತೀಯ ಆಟಗಾರರ ವಿರುದ್ಧ ಉದ್ದೀಪನ ಔಷಧಿ ತೆಗೆದುಕೊಂಡಿರುವ ಗುರುತರ ಆರೋಪ ಕೇಳಿ ಬಂದಿರುವುದು ಕ್ರೀಡಾವಲಯವನ್ನು ತಲ್ಲಣಗೊಳಿಸಿದೆ.

ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ಭಾರತೀಯ ಕ್ರೀಡಾಪಟುಗಳಾದ ರೇಸ್ ವಾಕರ್ ಕೆ.ಟಿ. ಇರ್ಫಾನ್ ಕೊಲೊಥಮ್ ಮತ್ತು ಟ್ರಿಪಲ್ ಜಂಪರ್ ವಿ. ರಾಖೇಶ್ ಬಾಬು ಅವರ ಕೋಣೆಯಲ್ಲಿ ಸೂಜಿಗಳು ಕಂಡು ಬಂದಿದೆ. ಇದು ಉದ್ದೀಪನ ಔಷಧಿ ಅನುಮಾನಕ್ಕೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ಆಟಗಾರರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ನಿಯಮಾವಳಿಗಳ ಪ್ರಕಾರ ಅಥ್ಲೇಟ್‌ಗಳು ಯಾವುದೇ ರೀತಿಯ ಸೂಜಿಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದರೆ ಇವರಿಬ್ಬರ ಕೋಣೆಯಲ್ಲಿ ಸೂಜಿ ಪತ್ತೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಅಥ್ಲೇಟಿಕ್ ಒಕ್ಕೂಟ, ನಿಗದಿತ ಸಮಯದೊಳಗೆ ಸಮಿತಿಯೊಂದನ್ನು ನೇಮಕ ಮಾಡಿ ತನಿಖೆ ನಡೆಸಿ ಒಂದು ವೇಳೆ ಉದ್ದೀಪನ ಔಷಧಿ ಸೇವಿಸಿರುವುದು ಕಂಡು ಬಂದರೆ ಅಥ್ಲೀಟ್‌ಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಸಿ.ಕೆ. ವಾಲ್ಸನ್ ತಿಳಿಸಿದ್ದಾರೆ.

ರಾಕೇಶ್ ಟ್ರಿಫಲ್ ಜಂಪರ್ ಮತ್ತು ಇರ್ಫಾನ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ತಮ್ಮ ಕೋಣೆಯಲ್ಲಿ ಸೂಜಿ ಹೇಗೆ ಬಂತು ಎಂಬುದು ಗೊತ್ತಿಲ್ಲ, ಎಂದು ಇಬ್ಬರು ಅಥ್ಲೀಟ್‌ಗಳು ಸ್ಪಷ್ಟಪಡಿಸಿದ್ದಾರೆ. ಕೋಣೆಯಲ್ಲಿ ಸೂಜಿ ಪತ್ತೆಯಾಗಿರುವ ಪ್ರಕರಣ ಸಮಗ್ರ ತನಿಖೆಯಿಂದಷ್ಟೇ ನಿಖರ ಕಾರಣ ತಿಳಿದು ಬರಬೇಕಿದೆ.

Leave a Comment