ಉತ್ತರ ಪ್ರದೇಶ : ೨೫,೦೦೦ ಗೃಹ ರಕ್ಷಕ ಸಿಬ್ಬಂದಿ ವಜಾ

ಲಕ್ನೋ, ಅ.೧೬- ಗೃಹ ರಕ್ಷಕ ಸಿಬ್ಬಂದಿಗೆ ಸುಪ್ರಿಂ ಕೋರ್ಟ್ ಸೂಚಿಸಿರುವಂತೆ ಹೆಚ್ಚಿನ ಭತ್ಯೆ ನೀಡಲು ಸಾಧ್ಯವಾಗದ ಕಾರಣ ೨೫,೦೦೦ ಗೃಹ ರಕ್ಷಕ ಸಿಬ್ಬಂದಿಯನ್ನು ಉತ್ತರ ಪ್ರದೇಶ ಸರ್ಕಾರ ವಜಾ ಮಾಡಲು ಮುಂದಾಗಿದೆ.
ಗೃಹ ರಕ್ಷಕ ಸಿಬ್ಬಂದಿಗೆ ದಿನದ ಭತ್ಯೆಯನ್ನು ೫೦೦ ರಿಂದ ೬೭೨ಕ್ಕೆ ಏರಿಸಬೇಕು ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಜುಲೈ ತಿಂಗಳಲ್ಲಿ ನೀಡಿದ ತೀರ್ಪಿನಲ್ಲಿ ಆದೇಶಿಸಿದೆ.
ಇದು ರಾಜ್ಯ ಸರಕಾರಕ್ಕೆ ಮಾಸಿಕ ೧೦ ರಿಂದ ೧೨ ಕೋಟಿ ರೂ. ಗಳಷ್ಟು ಹೆಚ್ಚಿನ ಹೊರೆಯಾಗಲಿದೆ . ಹೀಗಾಗಿ ಗೃಹ ರಕ್ಷಕ ದಳದ ಸಿಬ್ಬಂದಿಯ ನಿಯೋಜನೆಯನ್ನೇ ನಿಲ್ಲಿಸಲು ಸರಕಾರ ಆಗಸ್ಟ್ ೨೮ ರಂದು ತೀರ್ಮಾನ ತೆಗೆದುಕೊಂಡಿದೆ. ಹಾಗೆಯೇ ಮುಂದಿನ ಪರ್ಯಾಯ ವ್ಯವಸ್ಥೆಯ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ ಅವರು ಹೇಳಿದ್ದಾರೆ.
ಚುನಾವಣೆಗಳು, ರಾಷ್ಟ್ರೀಯ ದಿನಾಚರಣೆಗಳು, ಹಬ್ಬ ಹರಿದಿನಗಳು, ಜಾತ್ರೆಗಳು, ಅತಿ ಗಣ್ಯರ ಭೇಟಿಯ ಸಂದರ್ಭಗಳಲ್ಲಿ ರಕ್ಷಣಾ ಪಡೆ ಮತ್ತು ಪೊಲೀಸರ ಜೊತೆಗೆ ಗೃಹ ರಕ್ಷಕ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ.

Leave a Comment