ಉತ್ತರ ಪ್ರದೇಶ ಬಿಜೆಪಿಗೆ ಮುಖಭಂಗ

ಲಕ್ನೊ, ಮಾ. ೧೪- ಉತ್ತರ ಪ್ರದೇಶದ ಎರಡೂ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.
ಆಡಳಿತಾರೂಢ ಪಕ್ಷಕ್ಕೆ ಭಾರೀ ಪ್ರತಿಷ್ಠೆಯ ಕ್ಷೇತ್ರಗಳಾದ ಗೋರಕ್ ಪುರ್ ಮತ್ತು ಫುಲ್‌ಪುರ್ ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಬಿಜೆಪಿಯನ್ನು ಭಾರೀ ಅಂತರದಿಂದ ಹಿಂದಿಕ್ಕಿದ್ದಾರೆ.
ಹಲವು ಸುತ್ತುಗಳ ನಂತರದಲ್ಲಿ ಗೋರಕ್‌ಪುರ್ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರವೀಣ್ ನಿಷಾದ್ ಅವರು ತಮ್ಮ ಸಮೀಪದ ಬಿಜೆಪಿಯ ಉಪೇಂದ್ರ ದತ್ ಶುಕ್ಲಾಗಿಂತ 10,598ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.
ಹಾಗೆಯೇ ಫುಲ್‌ಪುರ್ ಲೋಕಸಭಾ ಕ್ಷೇತ್ರದಲ್ಲಿಯೂ ಸಮಾಜವಾದಿ ಪಕ್ಷದ ಅಭ್ಯರ್ಥಿ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್, ತಮ್ಮ ಸಮೀಪ ಬಿಜೆಪಿ ಅಭ್ಯರ್ಥಿಗಳಿಂದ 15,713 ಮತಗಳಷ್ಟು ಮುಂದಿದ್ದಾರೆ. ಈ ಕ್ಷೇತ್ರದಲ್ಲಿ ಕೌಶಲೇಂದ್ರ ಪಟೇಲ್ ಬಿಜೆಪಿ ಅಭ್ಯರ್ಥಿ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇಂದು ಉಪಚುನಾವಣೆ ಕ್ಷೇತ್ರಗಳ ಭಾರೀ ಕೋಲಾಹಲ ಸೃಷ್ಟಿಸಿತ್ತು. ಮತ ಎಣಿಕೆ ಕೇಂದ್ರಗಳಿಗೆ ಮಾಧ್ಯಮದವರನ್ನು ಬಿಡುತ್ತಿಲ್ಲ ಎಂಬ ವದಂತಿಯ ಹಿನ್ನಲೆಯೇ ಈ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೆ ಗೋರಕ್ ಪುರ್ ಜಿಲ್ಲಾಧಿಕಾರಿ ವದಂತಿಗಳಲ್ಲಿ ಸತ್ಯ ಇಲ್ಲ. ಮಾಧ್ಯಮದವರನ್ನು ನಿಷೇಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Comment