ಉಡುಪಿ ಜಿಲ್ಲಾಸ್ಪತ್ರೆ ವಿರುದ್ಧ ನಿರ್ಲಕ್ಷ್ಯ ಆರೋಪ

ಉಡುಪಿ, ನ.೨೦- ತನ್ನದೇ ಶೈಲಿಯ ಹಾಡುಗಳಿಂದ ಮನರಂಜಿಸುತಿದ್ದ ಕುಂದಾಪುರದ ವೈಕುಂಠ(೩೨) ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಬಹುಅಂಗಗಳ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇದೀಗ ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಲಾಗಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿದೆ.

ತೀವ್ರ ಅನಾರೋಗ್ಯದಿಂದ ಕುಂದಾಪುರದ ರಸ್ತೆಯ ಬದಿಯಲ್ಲಿ ನರಳುತಿದ್ದ ವೈಕುಂಠನನ್ನು ಕಳೆದ ನ.೧೩ರಂದು ಉಡುಪಿಯ ಜಿಲ್ಲಾಸ್ಪತ್ರೆಗೆ ಸೇರಿದ್ದರು. ಆತನಿಗೆ ಚಿಕಿತ್ಸೆ ನೀಡಿದ ಜಿಲ್ಲಾಸ್ಪತ್ರೆಯ ವೈದ್ಯ ಡಾ.ನಾಗೇಶ್ ಅವರ ನಿರ್ಲಕ್ಷ್ಯ ಧೋರಣೆಯಿಂದ ವೈರಲ್ ಸ್ಟಾರ್ ವೈಕುಂಠ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅನಾರೋಗ್ಯದಿಂದ ನರಳುತ್ತಿದ್ದ ವೈಕುಂಠನನ್ನು ಕುಂದಾಪುರದ ರಂಜಿತ್ ಹಂಗಳೂರು ಎಂಬವರು ೧೦೮ ಅಂಬುಲೆನ್ಸ್‌ನಲ್ಲಿ ನ.೧೩ರ ಅಪರಾಹ್ನ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ವೇಳೆ ಡಾ.ನಾಗೇಶ್, ಬೀದಿಯಲ್ಲಿರುವವರನ್ನೆಲ್ಲಾ ಸೇರಿಸಿಕೊಳ್ಳಲು ಇಂದು ಧರ್ಮಛತ್ರವಲ್ಲ. ನಮಗೆ ಊಟ ಮಾಡಲೂ ಅವಕಾಶ ಕೊಡುವುದಿಲ್ಲ ಎಂದೆಲ್ಲಾ ಅವಮಾನಕರ ರೀತಿಯಲ್ಲಿ ಬೈದು ರೋಗಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದನ್ನೆಲ್ಲಾ ಶೂಟಿಂಗ್ ಮಾಡಲು ಮುಂದಾದ ತಮ್ಮ ಮೊಬೈಲ್‌ನ್ನು ಕಿತ್ತುಕೊಂಡು ಹಾಳುಗೆಡವಿದ್ದರು ಎಂದು ರಂಜಿತ್ ಹಂಗಳೂರು ಹಾಗೂ ಪ್ರಸಾದ್ ಬೈಂದೂರು ಪತ್ರಕರ್ತರ ಬಳಿ ದೂರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ದೂರು ಹಾಗೂ ವೈದ್ಯರಿಂದ ಪ್ರತಿದೂರು ದಾಖಲಾಗಿದೆ.

Leave a Comment