ಉಡುಪಿಯಲ್ಲಿ ಕಾರ್ಯಕರ್ತರ ಹೊಕೈ

ಉಡುಪಿ, ಸೆ.೧೦- ಬಲವಂತದ ಬಂದ್ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ ನಡೆದ ಘಟನೆ ನಗರದ ಕಡಿಯಾಳಿಯಲ್ಲಿ ನಡೆದಿದೆ. ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಒಂದಿಷ್ಟು ಕಾರ್ಯಕರ್ತರು ಕಡಿಯಾಳಿಯಲ್ಲಿ ತೆರೆದಿದ್ದ ಅಂಗಡಿಗಳನ್ನು ಬಂದ್ ಬೆಂಬಲ ಸೂಚಿಸಿ ಮುಚ್ಚುವಂತೆ ಒತ್ತಾಯಿಸುತ್ತಿದ್ದರು. ಈ ಸಂದರ್ಭ ಇದನ್ನು ವಿರೋಧಿಸಿ ಸಂಘ ಪರಿವಾರದ ಕಾರ್ಯಕರ್ತೆ ಚೈತ್ರಾ ಎಂಬವರು ಕಾಂಗ್ರೆಸ್ ಕಾರ್ಯಕರ್ತರೆದುರು ನಿಂತು ಪ್ರಧಾನಿ ನರೇಂದ್ರ ಪರ ಘೋಷಣೆಗಳನ್ನು ಕೂಗಿದರು. ಬಂದ್ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಪರ ಘೋಷಣೆಗಳನ್ನು ಕೂಗಿದರು. ಅಷ್ಟರಲ್ಲಿ ನಗರಸಭಾ ಸದಸ್ಯ ಗಿರೀಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಮೋದಿ ಪರ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಪರಸ್ಪರ ವಾಗ್ವಾದ, ತಳ್ಳಾಟ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮಣಿಪಾಲದಲ್ಲೂ ಬಂದ್‌ಗೆ ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ರಿಕ್ಷಾ ತಳ್ಳಿ ಪ್ರತಿಬಟನೆ:
ಭಾರತ್ ಬಂದ್ ಬೆಂಬಲಿಸಿ ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್ ವಿನೂತನವಾಗಿ ಪ್ರತಿಭಟನೆ ನಡೆಸಿದೆ. ಆಶ್ರಯದಾತ ಆಟೋ ಯೂನಿಯನ್ ಅಧೀನದಲ್ಲಿ ಓಡಾಟ ನಡೆಸುವ ಆಟೊರಿಕ್ಷಾಗಳ ಚಾಲಕರು ತಮ್ಮ ರಿಕ್ಷಾಗಳನ್ನು ತಳ್ಳಿಕೊಂಡೇ ಹೋಗುವ ಮೂಲಕ ಇಂಧನ ಬೆಲೆಯೇರಿಕೆಯನ್ನು ಪ್ರತಿಭಟಿಸಿದರು. ನಗರದ ಬೋರ್ಡ್ ಹೈಸ್ಕೂಲ್‌ನಿಂದ ತ್ರಿವೇಣಿ ಸರ್ಕಲ್‌ವರೆಗೆ ರಿಕ್ಷಾವನ್ನು ತಳ್ಳಿಕೊಂಡು ಹೋಗುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

Leave a Comment