ಉಚ್ಛಾಟನೆ ಆದೇಶ ಪರಾಮರ್ಶೆಗೆ ಮನವಿ

ರಾಯಚೂರು.ಏ.16- ಪಕ್ಷ ವಿರೋಧಿ ಹೇಳಿಕೆ ಸಾಬೀತು ಪಡಿಸುವಂತೆ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಿಸ್ತು ಸಮಿತಿ ಅಧ್ಯಕ್ಷ ಎನ್.ಶಂಕ್ರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದೆಂದ ಬಿಜೆಪಿ ಉಚ್ಛಾಟಿತ ಮುಖಂಡ ಬಸವರಾಜ್ ಕಳಸ, ತಮ್ಮ ಉಚ್ಛಾಟನೆ ಸ್ಥಳೀಯ ನಾಯಕರ ಷಡ್ಯಂತ್ರದಿಂದ ಕೂಡಿದೆ ಎಂದರು.
ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಬಲವರ್ಧನೆಗೊಳಿಸಿರುವ ನಿಷ್ಠಾವಂತ ಮುಖಂಡರಿಗೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಗರ ಕ್ಷೇತ್ರ ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿದೆ. ಮೂಲಭೂತ ಸಮಸ್ಯೆ ಈಡೇರಿಸದೇ ರಾಯಚೂರನ್ನು ನರಕ ಸದೃಷ್ಯವನ್ನಾಗಿಸಿ ಕಾಂಗ್ರೆಸ್ ಏಜೆಂಟರಾಗಿ ಕಾರ್ಯ ನಿರ್ವಹಿಸಿರುವ ಡಾ.ಶಿವರಾಜ್ ಪಾಟೀಲ್ ಅವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡದಂತೆ ರಾಜ್ಯದ್ಯಕ್ಷರಲ್ಲಿ ಮನವರಿಕೆ ಮಾಡಲಾಗಿದೆ ಹೊರತು ಪಕ್ಷಕ್ಕೆ ಯಾವುದೇ ಅವಹೇಳನ ಮಾಡಿಲ್ಲ.
12 ಆಕಾಂಕ್ಷಿಗಳಲ್ಲಿ ಪಕ್ಷ ಕಟ್ಟಿ ಬೆಳೆಸಿದ ನಿಷ್ಟರಿಗೆ ಮಾತ್ರ ನಗರ ಕ್ಷೇತ್ರ ಟಿಕೆಟ್ ನೀಡುವಂತೆ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಮುಂದೆ ಆಗ್ರಹಿಸಲಾಗಿತ್ತು. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಚಟುವಟಿಕೆ ಖಂಡನೀಯವೆಂದ ಅವರು ಯಾವುದೇ ನೋಟೀಸ್ ಜಾರಿಗಳೊಳಿಸದೇ ತಮ್ಮನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಹಿಂದೆ ಸ್ಥಳೀಯ ನಾಯಕರ ಷಡ್ಯಂತ್ರ ಅಡಗಿದೆ. ಪಕ್ಷ ವಿರೋಧ ಚಟುವಟಿಕೆಯಲ್ಲಿ ತೊಡಗಿ ಕೆಲವರು ರಾಜ್ಯಾದ್ಯಂತ ದಂಗೆಯೆದ್ದರೂ ಯಾವೊಬ್ಬರ ವಿರುದ್ಧ ಕ್ರಮ ವಹಿಸದ ಹೈಕಮಾಂಡ್ ಕೆಲ ಸ್ಥಳೀಯ ಮುಖಂಡರ ಇಲ್ಲಸಲ್ಲದ ಆರೋಪಕ್ಕೆ ಮಣಿದು ತಮ್ಮನ್ನು ಏಕಾಏಕಿ ಪಕ್ಷದಿಂದ ಉಚ್ಛಾಟಿಸಲಾಗಿದೆ.
ವ್ಯಕ್ತಿಗತ ಆಂತರಿಕ ಹೋರಾಟ ನಿಷ್ಟರ ಪರವಾಗಿ ಟಿಕೆಟ್ ಹಂಚಿಕೆ ಮಾಡುವಂತೆ ಧ್ವನಿಯೆತ್ತಿರುವ ತಮಗಾಗಿರುವ ಅನ್ಯಾಯ ಹಾಗೂ ಉಚ್ಛಾಟನೆ ಆದೇಶ ಪರಾಮರ್ಶಿಸುವಂತೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸ್ಥಳಿಯರೇ ಆಗಿರುವ ಶಿಸ್ತು ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಮೂಲ ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚಿಸಿ, ತಮ್ಮ ಮುಂದಿನ ನಡೆ ಕುರಿತು ತೀರ್ಮಾನಿಸಲಾಗುವುದೆಂದರು.

Leave a Comment