ಉಚಿತ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರ

 ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ
ರಾಯಚೂರು.ಸೆ.09- ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವೆಂದು ಜಿಲ್ಲಾ ಪರಿಸರ ಅಧಿಕಾರಿ ಎಸ್.ಎಂ.ನಟೇಶ ಹೇಳಿದರು.
ಅವರಿಂದು ಸ್ಥಳೀಯ ಮನ್ಸಲಾಪೂರು ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣ ರೈಸ್ ಮಿಲ್‌ನಲ್ಲಿ ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ, ಗ್ರೀನ್ ರಾಯಚೂರು ಮತ್ತು ನವೋದಯ ಶಿಕ್ಷಣ ಸಂಸ್ಥೆ ಸಮೂಹ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟರ್ ಆಪ್ ಪ್ಯಾರೀಸ್‌ನಿಂದ ತಯಾರಿಸುವ ಗಣಪತಿ ಮೂರ್ತಿಗಳಿಂದ ಜಲ ಮಾಲೀನ್ಯಕ್ಕೆ ಹಾನಿಯಾಗಿ, ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಮಣ್ಣಿನಿಂದ ತಯಾರಿಸಿರುವ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಈಗಾಗಲೇ ಸರ್ಕಾರವೂ ಈ ಕುರಿತು ಆದೇಶ ನೀಡಿದೆ. ಗ್ರೀನ್ ಸಂಸ್ಥೆ ರಾಯಚೂರು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವೆಂದರು. ಸೂಗಣ್ಣ ಬಡಿಗೇರಾ ಅವರು ಮಣ್ಣಿನಿಂದ ತಯಾರಿಸುವ ಗಣಪತಿ ಮೂರ್ತಿಗಳ ವಿಧಾನ ಬಗ್ಗೆ ತರಬೇತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯರು, ಮಕ್ಕಳು ಆಗಮಿಸಿ ಮಣ್ಣಿನ ಗಣಪತಿ ತಯಾರಿಸುವಲ್ಲಿ ನಿರತರಾಗಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಗ್ರೀನ್ ಸಂಸ್ಥೆ ಅಧ್ಯಕ್ಷ ಕೊಂಡಾಕೃಷ್ಣಮೂರ್ತಿ, ಅಮರೇಶ, ನಾಗರಾಜ, ಗಣೇಶ, ಕುಪೇಂದ್ರ ಯಾದವ, ವೈಷ್ಣವಿ, ರಾಜೇಂದ್ರಕುಮಾರ ಶಿವಾಳೆ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment