ಉಚಿತ ಕಣ್ಣಿನ ಆರೋಗ್ಯ ಶಿಬಿರಕ್ಕೆ ಒತ್ತಾಯ

ಪಾವಗಡ, ಆ. ೧೦- ತಾಲ್ಲೂಕಿನಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಪಟ್ಟಣದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ತಾಲ್ಲೂಕು ವೈದ್ಯಾಧಿಕಾರಿಗಳನ್ನು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿವೆ.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ಕಣ್ಣಿನ ವಿಭಾಗದ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಆದ್ದರಿಂದ ಖಾಸಗಿ ಅಸ್ಪತ್ರೆಗಳಿಗೆ ತೆರಳಿ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬೇಕು. ಈ ವೇಳೆ ದುಬಾರಿ ಹಣ ನೀಡಬೇಕಾಗುತ್ತದೆ. ಇದರಿಂದ ಬಡ ರೋಗಿಗಳ ಅನುಕೂಲಕ್ಕಾಗಿ ನಮ್ಮ ಹೆಲ್ಪ್ ಸೊಸೈಟಿ, ರೋಟರಿ ಸಂಸ್ಥೆ ಮತ್ತು ನಮ್ಮ ಹಕ್ಕು ಸಂಸ್ಥೆ ಹಾಗೂ ಚಿನ್ಮಯ ಸಂಸ್ಥೆ, ದೊಮ್ಮತಮರಿ ಗ್ರಾಮದ  ಸರ್ವ ಸಂಸ್ಥೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಉಚಿತ ಕಣ್ಣಿನ ತಪಸಣಾ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡುವುದರ ಜತೆಗೆ ಅವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಸೌಲಭ್ಯವನ್ನು ಸಹ ಮಾಡಿಕೊಡುತ್ತಿದ್ದು,  ಕಣ್ಣಿನ ತೊಂದರೆಗಳಾದ ಕುಣಿಕೆ ಹುಣ್ಣು, ಕಣ್ಣಿನ ದುರ್ಮಾಂಸ ಬೆಳೆಯುವ ಕಾಯಿಲೆಗಳಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದು ಸಾವಿರಾರು ರೂ.ಗಳನ್ನು ಪೀಕುತ್ತಾರೆ  ಮತ್ತು  ಕಪ್ಪು ಕನ್ನಡಕಗಳಿಗೂ ಸಹ  ಶಸ್ತ್ರಚಿಕಿತ್ಸೆಯಾದ ನಂತರ ಬಳಸುವ ಕನ್ನಡಕಗಳಿಗೂ ಹಣ ಪಡೆಯುತ್ತಾರೆ. ಇದರಿಂದ ತಾಲ್ಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ. ನಾವು ಉಚಿತ  ಶಿಬಿರಗಳನ್ನು ನಡೆಸುವುದರಿಂದ ಸಾವಿರಾರು ರೂ.ಗಳು ಬಡ ರೋಗಿಗಳಿಗೆ ಉಳಿತಾಯವಾಗುತ್ತಿದೆ ಎಂದರು.

ಜಿಲ್ಲಾ ಕುಷ್ಟರೋಗ ಅಧಿಕಾರಿ ತಾಲ್ಲೂಕಿನಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳು ಕಣ್ಣಿನ ಶಿಬಿರಗಳನ್ನು  ನಡೆಸಬಾರದು ಎಂದು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯವರಿಗೆ ಈ ಬಗ್ಗೆ  ಮೌಖಿಕವಾಗಿ ಆದೇಶಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹಕ್ಕು ಸಂಸ್ಥೆ ಅಧ್ಯಕ್ಷ ಗಿರಿ ಮಾತನಾಡಿ, ಅತಿ ಹಿಂದುಳಿದ ತಾಲ್ಲೂಕಾದ ಪಾವಗಡ ತಾಲ್ಲೂಕಿನಲ್ಲಿ ಅತ್ಯಂತ ಬಡ ರೋಗಿಗಳಿದ್ದು, ಈ ರೋಗಿಗಳ ಹಿತ  ದೃಷ್ಟಿಯಿಂದ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ತಾಲ್ಲೂಕಿನಲ್ಲಿ ಶಿಬಿರಗಳನ್ನು ನಡೆಸಲು ಅವಕಾಶ ನೀಡಬೇಕು. ಇಲ್ಲದಿದ್ದ ಪಕ್ಷದಲ್ಲಿ ತಾಲ್ಲೂಕಿನ ಸುಮಾರು 40 ಸಂಘ ಸಂಸ್ಥೆಗಳು ಜಿಲ್ಲಾ ಕುಷ್ಟರೋಗ ವಿಭಾಗದ ಅಧಿಕಾರಿ ವಿರುದ್ದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್‌ಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ  ಸ್ವೀಕರಿಸಿ ಮಾತನಾಡಿದ ಡಾ. ವೆಂಕಟೇಶ್‌ಮೂರ್ತಿ, ಈ ಬಗ್ಗೆ ಚರ್ಚಿಸಿ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಕಮಲ್, ಕಾರ್ತಿಕ್, ತಿಮ್ಮರಾಜು, ಅನಿಲ್, ಲೋಕೇಶ್, ನರೇಶ್, ಹನುಮಂತರಾಯ, ಮತ್ತಿತರರು ಉಪಸ್ಥಿತರಿದ್ದರು.

Leave a Comment