ಉಘೇ ಉಘೇ ಮಾದೇಶ್ವರ- 150

ವಾರಾಂತ್ಯದ ಜಾನಪದ ಧಾರಾವಾಹಿ ಉಘೇ ಉಘೇ ಮಾದೇಶ್ವರ ಯಶಸ್ವಿಯಾಗಿ 150 ಕಂತು ಪೂರೈಸಿದೆ.

2018ರ ಸೆಪ್ಟೆಂಬರ್ 8ರಂದು ಪ್ರಸಾರ ಆರಂಭಗೊಂಡ ಧಾರಾವಾಹಿ ಕಳೆದ ವಾರ 150 ನೇ ಕಂತಿನೊಂದಿಗೆ ಒಂದೂವರೆ ವರ್ಷ ಪೂರೈಸಿದ್ದು, ಕನ್ನಡ ಕಿರುತೆರೆ ಮಟ್ಟಿಗೆ ದಾಖಲೆ.
ಕನ್ನಡದ ಜಾನಪದ ಸಂಪತ್ತು ಮಾದೇಶ್ವರ ಮಹಾಕಾವ್ಯವನ್ನು ಜಗತ್ತಿನ ಅತಿದೊಡ್ಡ ಮೌಖಿಕ ಮಹಾಕಾವ್ಯವೆಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ಈ ಕಾವ್ಯ ಚಾಮರಾಜನಗರ ಜಿಲ್ಲೆ ಮಲೆ ಮಾದೇಶ್ವರ ಬೆಟ್ಟದಲ್ಲಿ ದೇವರಾಗಿ ನೆಲೆಸಿರುವ ಮಾದೇಶ್ವರರ ಕಥೆಯನ್ನು ಹೇಳುತ್ತದೆ. ಇವರು ೧೫ ನೇ ಶತಮಾನದ ಪವಾಡ ಪುರುಷರು. ಗುಡ್ಡಗಾಡು ಜನರಿಗೆ ಅಹಿಂಸೆಯ ಮಾರ್ಗದಲ್ಲಿ ಬದುಕುವ ದಾರಿ ತೋರಿಸಿದವರು. ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದ ರಾಜನನ್ನೇ ಉಪಾಯದಿಂದ ನಿವಾರಿಸಿದವರು. ಮಹಿಳೆಯರ ಆತ್ಮಗೌರವ ಹೆಚ್ಚುವಂತೆ ಮಾಡಿದರು. ಪ್ರಾಣಿಹಿಂಸೆ ನಿಲ್ಲಿಸಿದರು. ಬುಡಕಟ್ಟು ಜನರನ್ನು ಸಸ್ಯಾಹಾರಿಗಳನ್ನಾಗಿ ಮಾಡಿದರು. ಅವರಿಗೆ ಕೃಷಿ ಕಲಿಸಿದರು. ಎಲ್ಲರೂ ಸಮಾನ ಎಂದು ನಿದರ್ಶನಗಳ ಮೂಲಕ ತೋರಿಸಿಕೊಟ್ಟರು. ದೀರ್ಘ ಸಂಚಾರ ಕೈಗೊಂಡು ಸಮಾಜೋದ್ಧಾರ ಮಾಡಿದರು.

ಜನರು ಅವರನ್ನು ಶಿವನ ಅಂಶವೆಂದೇ ಪರಿಗಣಿಸಿ ಪೂಜಿಸುತ್ತಾರೆ. ಹಾಡುಗಳ ಮೂಲಕ ಅವರ ವೃತ್ತಾಂತ ಬಿತ್ತರಿಸುತ್ತಾರೆ. ಈ ಮಹಾಕಾವ್ಯದಲ್ಲಿ ಹತ್ತಾರು ಕವಲುಗಳಿದ್ದು ?ಸಾಲುಗಳು? ಎಂದು ಕರೆಯಲಾಗಿದೆ. ಉಘೇ ಉಘೇ ಎನ್ನುವುದು ಮಾದೇಶ್ವರರಿಗೆ ಭಕ್ತರು ಹಾಕುವ ವಿಶಿಷ್ಟ ಜೈಕಾರ.

ಉಘೇ ಉಘೇ ಮಾದೇಶ್ವರ ೧೫೦ನೆಯ ಸಂಚಿಕೆಯಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮಾದೇಶ್ವರರ ಅವತರಣದ ಮೂಲ ಗುರಿ ಶ್ರವಣ ಸಂಹಾರಕ್ಕೆ ವೇದಿಕೆ ಸಜ್ಜಾಗುತ್ತದೆ. ಚರ್ಮದ ಪಾದರಕ್ಷೆಗಳನ್ನು ಮಾಡುವ ಮಹಾಶರಣ ಹರಳಯ್ಯನ ಸಾಲು ಆರಂಭವಾಗುತ್ತದೆ. ರಕ್ಕಸ ಶ್ರವಣನ ಸಂಹಾರ ಅವನ ಪಾದಗಳ ಮೂಲಕ ಆಗಬೇಕೆಂಬ ಅಭಿಶಾಪವಿದೆ. ಇದನ್ನು ಪೂರೈಸಲು ಮಾದಪ್ಪ ಹರಳಯ್ಯನ ನೆರವು ಪಡೆಯುತ್ತಾರೆ. ಮಾದಾರಿಯ ರೂಪದಲ್ಲಿ ಶ್ರವಣನ ಆಸ್ಥಾನ ಪ್ರವೇಶಿಸುತ್ತಾರೆ. ಇಲ್ಲಿಂದ ಮುಂದೆ ಶ್ರವಣನ ಸಂಹಾರದ ತನಕ ಪಯಣ ರೋಚಕ. ಶ್ರವಣ ಸಂಹಾರದ ನಂತರವೂ ಮಾದೇಶ್ವರರ ಕಥೆ ಸಾಕಷ್ಟಿದೆ.

“ಅನಿವಾರ್ಯ ಕಾರಣಗಳಿಂದ ಪ್ರಸಾರ ಸಮಯ ಬದಲಾವಣೆಗೊಂಡಾಗಲೂ ವೀಕ್ಷಕರು ಅದೇ ಭಕ್ತಿ-ನಿಷ್ಠೆಯಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ?ಉಘೇ ಉಘೇ ಮಾದೇಶ್ವರ?ದ ಯಶಸ್ಸು ಇನ್ನೂ ಇಂಥ ಅಚ್ಚಕನ್ನಡ ಕಥೆಗಳನ್ನು ತೆರೆಗೆ ತರಲು ಸ್ಫೂರ್ತಿಯಾಗಿದೆ ” ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.

“ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲೂ ವೀಕ್ಷಕರು ಹೆಚ್ಚಿದ್ದಾರೆ. ಕೌಟುಂಬಿಕ ಹಾಗೂ ನೈತಿಕ ಸ್ವಾಸ್ಥ್ಯ ಉಳಿಸುವಲ್ಲಿ ಧಾರಾವಾಹಿ ಸ್ಫೂರ್ತಿಯಾಗಿರುವ ನಿದರ್ಶನಗಳನ್ನು ಕಂಡಾಗ ಸಾರ್ಥಕವೆನ್ನಿಸುತ್ತದೆ” ಎನ್ನುತ್ತಾರೆ ನಿರ್ಮಾಪಕ-ಪ್ರಧಾನ ನಿರ್ದೇಶಕ ಕೆ. ಮಹೇಶ್ ಸುಖಧರೆ.

ಬುಕ್ಕಾಪಟ್ಣ ವಾಸು ನಿರ್ದೇಶನ, ಚಂದ್ರು ಛಾಯಾಗ್ರಹಣ, ಬಿ.ಎ.ಮಧು-ನಾಗಮಂಗಲ ಕೃಷ್ಣಮೂರ್ತಿಯವರ ಜಾನಪದ ನುಡಿಗಟ್ಟುಗಳ ಸಂಭಾಷಣೆ ಧಾರಾವಾಹಿಯ ಶ್ರೀಮಂತಿಕೆ ಹೆಚ್ಚಿಸಿವೆ.

ತಾರಾಗಣದಲ್ಲಿ ಮಾದೇಶ್ವರರಾಗಿ ಆರ್ಯನ್ ರಾಜ್, ಶ್ರವಣದೊರೆಯಾಗಿ ವಿನಯ್ ಗೌಡ, ಸಂಕವ್ವನಾಗಿ ಹರ್ಷಿಲಾ, ನೀಲೇಗೌಡನಾಗಿ ಪ್ರಸನ್ನ, ಬೇಡರ ಕನ್ನಯ್ಯನಾಗಿ ನಾಗರಾಜ್ ಶಿರಸಿ, ಶಿವನಾಗಿ ಶರತ್ ಕ್ಷತ್ರಿಯ, ದುಂಡೇಗೌಡರಾಗಿ ಶಂಖನಾದ ಆಂಜನಪ್ಪ, ಕಿರುತೆರೆ-ರಂಗಭೂಮಿಯ ನೂರಾರು ಕಲಾವಿದರು ಧಾರಾವಾಹಿಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಶರಣ ಹರಳಯ್ಯನಾಗಿ ಖ್ಯಾತ ಜಾನಪದ ಹಾಡುಗಾರ ಮೈಸೂರು ಗುರುರಾಜ್, ಪತ್ನಿ ಕಲ್ಯಾಣಿ ಪಾತ್ರದಲ್ಲಿ ನೀನಾಸಂ ಕಲಾವಿದೆ ಬಿಂದು ಕಾಣಿಸಿಕೊಳ್ಳಲಿದ್ದಾರೆ.

Leave a Comment