ಉಗ್ರರ ವಿರುದ್ಧ ಕಾರ್ಯಾಚರಣೆ  ಇಬ್ಬರು ಯೋಧರು ಹುತಾತ್ಮ

ಶ್ರೀನಗರ, ಏ. ೬- ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರಗಾಮಿಗಳ ವಿರುದ್ಧ ನಡೆದ ಗುಂಡಿನ ಕಾಳಗದ ವೇಳೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ನಿನ್ನೆ ಕಾರ್ಯಾಚರಣೆ ವೇಳೆ ಮೂವರು ಸೇರಿದಂತೆ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದಾರೆ.
ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಗಡಿಯೊಳಕ್ಕೆ ನುಸುಳಲು ಉಗ್ರರ ಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿರುವ ಸೇನಾ ಪಡೆಗಳು, ನಿನ್ನೆ ಐವರು ಭಯೋತ್ಪಾದರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೀರಲ್ ವಲಯದಲ್ಲಿ ಗಡಿದಾಟಿ ಭಯೋತ್ಪಾದಕರು ಒಳ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಭಾರತೀಯ ಪ್ರಾಂತ್ಯವಾದ ಶಂಶಾಬರಿ ವಲಯದ ಬಳಿಯು ಉಗ್ರರು ಗಡಿಯೊಳಕ್ಕೆ ನುಸುಳಲು ಯತ್ನಿಸಿದ್ದಾರೆ. ಭಾರತೀಯ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ.
ಕೀರಲ್ ವಲಯದಲ್ಲಿ ಉಗ್ರರ ನುಸುಳಲು ಯತ್ನಿಸುತ್ತಿದ್ದು, ಸೇನಾಪಡೆಗಳು ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪ ಕಟ್ಟೆಚ್ಚರ ವಹಿಸಿ ಈಗಾಗಲೇ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಗಡಿಯಲ್ಲಿ ಪ್ರತಿಕೂಲ ವಾತಾವರಣದ ಲಾಭ ಪಡೆದು ದೇಶದೊಳಕ್ಕೆ ನುಗ್ಗಲು ಭಯೋತ್ಪಾದಕರು ಪ್ರಯತ್ನಿಸುತ್ತಿದ್ದಾರೆ. ಐವರು ಉಗ್ರಗಾಮಿಗಳನ್ನು ಗುಂಡಿಕ್ಕಿ ಸೇನಾ ಪಡೆಗಳು ಹತ್ಯೆ ಮಾಡಿದ ನಂತರ ಉಗ್ರರು ಕಣಿವೆಯೊಳಕ್ಕೆ ಪ್ರವೇಶಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಾಸ್ತವ ಗಡಿ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

Leave a Comment