ಉಗುರಿನ ಸೌಂದರ್ಯಕ್ಕೆ ಸರಳ ಸಲಹೆ

ಸುಂದರವಾದ ಮತ್ತು ನುಣುಪಾದ ಉಗುರುಗಳನ್ನು ಪಡೆಯಬೇಕೆಂಬುದು ಸಾಮಾನ್ಯವಾಗಿ ಎಲ್ಲ ಮಹಿಳೆಯರ ಆಸೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ನೈಲ್ ಪಾಲೀಶ್ ಗಳನ್ನು ಹಾಕಿಕೊಂಡು ಅಂದವಾಗಿ ಕಾಣಬೇಕೆಂದು ಕನಸು ಕಾಣುತ್ತಾರೆ.

ಆದರೆ ಕೆಲವೊಮ್ಮೆ ಉಗುರುಗಳು ಬಿರುಕುಗೊಂಡು, ಮುರಿದು ಬೀಳುತ್ತವೆ. ಅಂತಹ ಸಂದರ್ಭದಲ್ಲಿ ಆರೋಗ್ಯವಂತ ಉಗುರುಗಳನ್ನು ಪಡೆದುಕೊಳ್ಳಲು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದಂತಹ ಸುಲಭವಾದ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.

ಕೊಬ್ಬರಿ ಎಣ್ಣೆ : ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಉಗುರುಗಳ ಮೇಲೆ ಹಚ್ಚಿ, ೫-೧೦ ನಿಮಿಷಗಳ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಉಗುರುಗಳನ್ನು ನಿರ್ಜಲೀಕರಣದಿಂದ ತಪ್ಪಿಸುತ್ತದೆ. ಇದನ್ನು ದಿನದಲ್ಲಿ ೨-೩ ಬಾರಿ ಮಾಡಿದರೆ ಉತ್ತಮ.

ವಿಟಮಿನ್ ಇ : ದುರ್ಬಲ ಉಗುರುಗಳಿಗೆ ತೇವಾಂಶದ ಕೊರತೆಯು ಕಾರಣವಾಗಿರುತ್ತದೆ. ಅದಕ್ಕಾಗಿ ವಿಟಮಿನ್ ಇ ಕ್ಯಾಪ್ಸುಲ್ ಗಳಲ್ಲಿರುವ ಎಣ್ಣೆಯ ಅಂಶವನ್ನು ತೆಗೆದುಕೊಂಡು, ಉಗುರುಗಳ ಮೇಲೆ ಹಚ್ಚಿ. ಪ್ರತಿದಿನ ೨-೩ ಬಾರಿ ಮಲಗುವ ಮುನ್ನ ಮಸಾಜ್ ಮಾಡುತ್ತಿದ್ದರೆ ಒಳ್ಳೆಯದು.

ಬಿಸಿ ಎಣ್ಣೆಯ ಮಸಾಜ್ : ನೈಸರ್ಗಿಕ ತೈಲಗಳಾದ ಆಲಿವ್ ಆಯಿಲ್, ಅರಳೆಣ್ಣೆ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆಗಳನ್ನು ಮಿಶ್ರ ಮಾಡಿ. ನಂತರ ಈ ಮಿಶ್ರಣವನ್ನು ಉಗುರು ಬೆಚ್ಚಗಾಗುವವರೆಗೂ ಬಿಸಿ ಮಾಡಿ, ಉಗುರುಗಳನ್ನು ಇದರಲ್ಲಿ ಅದ್ದಿ ಇಟ್ಟುಕೊಳ್ಳಿ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆದುಕೊಂಡು ಶುಭ್ರವಾದ ಬಟ್ಟೆಯಿಂದ ಒಣಗಿಸಿಕೊಳ್ಳಿ.

ಟೊಮ್ಯಾಟೊ : ಇದರಲ್ಲಿರುವ ಲಿಕೊಪಿನ್ ಮತ್ತು ಬಯೊಟಿನ್ ಅಂಶವು ಆರೋಗ್ಯವಂತ ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಂದು ಟೊಮ್ಯಾಟೊ ಹಣ್ಣನ್ನು ಬ್ಲೆಂಡರ್ ನಲ್ಲಿ ಹಾಕಿ ಗಟ್ಟಿಯಾದ ರಸವನ್ನು ತೆಗೆದುಕೊಳ್ಳಿ. ಈ ದ್ರಾವಣಕ್ಕೆ ಆಲಿವ್ ಆಯಿಲ್ ಅನ್ನು ಸೇರಿಸಿ, ನಿಮ್ಮ ಕೈ ಬೆರಳುಗಳನ್ನು ಅದರಲ್ಲಿ ೧೦ ನಿಮಿಷಗಳ ಕಾಲ ಅದ್ದಿಡಿ. ನಂತರ ನೀರಿನಲ್ಲಿ ತೊಳೆದುಕೊಳ್ಳಿ.

Leave a Comment