ಈ ಅಜ್ಜಿಗೆ ಮರಳೇ ಮೃಷ್ಟಾನ್ನ!

ಮರಳಿನಲ್ಲಿ ಆಟವಾಡೋ ಮಕ್ಕಳನ್ನು ಹೆತ್ತವರು ಜೋರಾಗಿಯೇ ಗದರಿಸುತ್ತಾರೆ, ಮಕ್ಕಳು ಮರಳನ್ನು ತಿಂದರೆ ಏನು ಗತಿ ಎಂದು ಆತಂಕ ಪಡುತ್ತಾರೆ, ಮರಳಿನ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸುತ್ತಾರೆ.

ಆದರೆ ಇಲ್ಲೊಂದು ವಿಚಿತ್ರ ಘಟನೆ ಇದೆ. ವಾರಣಾಸಿ ಮಹಿಳೆಯೊಬ್ಬಳು ಮರಳು ಸಿಕ್ಕರೆ ಗಬಗಬ ಎಂದು ತಿಂದು, ಡಱ್ರೆಂದು ತೇಗುತ್ತಾಳೆ. ಊಟ, ತಿಂಡಿ ಕೊಟ್ಟರೆ ಮುಖ ಊದಿಸಿಕೊಳ್ತಾಳೆ. ಆದರೆ ಪಾತ್ರೆ ತುಂಬ ಮರಳು ಕೊಟ್ಟರೆ ಊದಿಸಿಕೊಂಡ ಮುಖ ಅವಲಕ್ಕಿ ಹರಳು ಹುರಿದಂತೆ ಆಗುತ್ತದೆ.

ವಾರಣಾಸಿಯ ೭೮ ವರ್ಷದ ಈ ಅಜ್ಜಿಗೆ ಈಗಲೂ ಊಟಕ್ಕೆ ಮರಳೇ ಬೇಕು. ಕುಸುಮಾವತಿ ಹೆಸರಿನ ಈ ಅಜ್ಜಿ ದಿನನಿತ್ಯ ೨ ಕೆ.ಜಿ. ಯಷ್ಟು ಮರಳು ತಿನ್ತಾಳೆ. ಮನೆಯಲ್ಲಿ ಎಲ್ಲರೂ ಘಮ್ ಎನ್ನುವ ಊಟ, ತಿಂಡಿ, ಸಿಹಿ ತಿಂದರೆ, ಈಕೆ ಅತ್ತಕಡೆ ತಲೆ ಹಾಕಲ್ಲ. ಹಾಗಾಗಿ ಮನೆಯವರು ಊಟದ ವೇಳೆ ಎಲ್ಲರಿಗೂ ಭಕ್ಷ್ಯ ಭೋಜನ ಬಡಿಸಿದರೆ, ಒಲ್ಲದ ಮನಸ್ಸಿನಿಂದ ಅಜ್ಜಿ ತಟ್ಟೆಗೆ ಮರಳು ಸುರಿಯುತ್ತಾರೆ.

ನಿತ್ಯ ಮರಳಿನ ಆಹಾರ ಸೇವಿಸುತ್ತಿರುವ ಕುಸುಮಾವತಿ ಅಜ್ಜಿಗೆ ಈ ಅಭ್ಯಾಸ ಇಂದಿನದಲ್ಲ. ೧೫ ವರ್ಷದ ಬಾಲ್ಯದ ದಿನದಿಂದಲೇ ಮರಳು ತಿನ್ನೋ ಅಭ್ಯಾಸ ಮಾಡಿಕೊಂಡಿದ್ದಳು. ಆರಂಭದಲ್ಲಿ ಯಾರು ಎಷ್ಟೇ ವಿರೋಧಿಸಿದರೂ, ಮರಳು ತಿನ್ನೋದನ್ನು ಬಿಡಲೇ ಇಲ್ವಂತೆ.

ಬಾಲ್ಯದಲ್ಲಿ ಮರಳು ತಿಂದಿದ್ದರಿಂದ ಹೊಟ್ಟೆನೋವು ಬರುತ್ತಿತ್ತು. ಹೆತ್ತವರು ವೈದ್ಯರಿಗೆ ತೋರಿಸಿದರು. ಮರಳು ತಿನ್ನೋದನ್ನು ಬಿಡು ಎಂದು ವೈದ್ಯರು ಸಲಹೆ ಕೊಟ್ಟರು. ಹೊಡೆದು – ಬಡಿದು ಬುದ್ಧಿ ಹೇಳಿದರೂ ಕುಸುಮಾವತಿ ಮರಳು ತಿನ್ನೋದನ್ನು ಮಾತ್ರ ಬಿಡಲಿಲ್ಲವಂತೆ!.

ಕುಸುಮಾವತಿ ಕಳೆದ ೬೩ ವರ್ಷಗಳಿಂದ ಮರಳನ್ನು ತಿನ್ನುತ್ತಾ ಬಂದಿದ್ದಾಳೆ. ಆದರೆ ಯಾವ ರೋಗವೂ ಆಕೆಯನ್ನು ಈವರೆಗೆ ಕಾಡಿಲ್ಲ. ಮಕ್ಕಳು ತಿಂದರೆ ಅನಾರೋಗ್ಯ ಎಂದು ಎಲ್ಲರೂ ಹೇಳ್ತಾರೆ. ಅದು ಸುಳ್ಳು. ನಾನು ಪ್ರತಿ ನಿತ್ಯ ಮರಳು ತಿನ್ನುತ್ತಿರುವುದರಿಂದ ನಾನು ಆರೋಗ್ಯವಾಗಿದ್ದೇನೆ ಎಂದು ನಗುತ್ತಾಳೆ ಕುಸುಮಾವತಿ.

ಈವರೆಗೆ ನನಗೆ ಯಾವುದೇ ಕಾಯಿಲೆ ಬಂದಿಲ್ಲ. ಮರಳು ತಿನ್ನುವುದರಿಂದ ಹೊಟ್ಟೆನೋವು ಅನುಭವಿಸಿಲ್ಲ. ಒಂದೇ ಒಂದು ಹಲ್ಲು ಉದುರಿಲ್ಲ. ಸದೃಢವಾಗಿರಲು ಮರಳೇ ಕಾರಣ ಎನ್ನುವ ಈ ಅಜ್ಜಿ, ನೀವೂ ಮರಳು ತಿನ್ನಿ ಎಂದು ಪುಕ್ಕಟೆ ಸಲಹೆ ಕೊಡ್ತಾಳೆ.

ಈಗಲೂ ಮೊಮ್ಮಕ್ಕಳು ಮರಳು ತಿನ್ನಬೇಡ ಎಂದು ಕೈನಿಂದ ಮರಳು ಪಾತ್ರೆ ಕಿತ್ಕೋತಾರೆ. ಆದರೆ ಅವರನ್ನು ಗದರಿಸಿ ಹೊರಕ್ಕೆ ಕಳುಹಿಸಿ ಮರಳು ತಿನ್ತೀನಿ ಎನ್ನುತ್ತಾಳೆ.
ಪ್ರತಿನಿತ್ಯ ಎದ್ದೊಡನೆ ಮರಳಿರುವ ಜಾಗ ಹುಡುಕಿಕೊಂಡು ಹೋಗುತ್ತೇನೆ. ಮರಳನ್ನು ಶುದ್ಧಿಗೊಳಿಸಿ ನಂತರ ತಿನ್ನುತ್ತೇನೆ. ಕೆಲವೊಮ್ಮೆ ಮರಳು ಸಿಗೋದಿಲ್ಲ. ಆಗ ನನ್ನ ಪಜೀತಿ ದೇವರಿಗೂ ಬೇಡ.

ಮಕ್ಕಳು, ಮೊಮ್ಮಕ್ಕಳು ಮರಳು ತಂದು ಕೊಡುವ ಮಾತಂತೂ ದೂರವೇ ಉಳಿಯಿತು. ಆಗ ಮರಳಿರುವ ಜಾಗ ಹುಡುಕಿಕೊಂಡು ಮರಳು ತಿನ್ತೇನೆ ಎಂದು ಹೇಳುತ್ತಾಳೆ.
ಬಾಲ್ಯದಿಂದಲೂ ಮರಳು ತಿಂದು ಬದುಕಿರುವ ಅಜ್ಜಿ ವೈದ್ಯಲೋಕಕ್ಕೆ ಸವಾಲಾಗಿದ್ದಾಳೆ. ಎಷ್ಟೋ ಮಂದಿ ವೈದ್ಯರು ಅಚ್ಚರಿಪಟ್ಟಿದ್ದಾರೆ.

Leave a Comment