ಈಶ್ವರಪ್ಪಗೆ ಪ್ರತಿಭಟನೆಯ ಬಿಸಿ

ಮೈಸೂರು, ಸೆ. ೨೨- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವ ಭರದಲ್ಲಿ ವಡ್ಡ ಪದ ಬಳಸಿ ನಿಂದಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಭೋವಿ ಜನಾಂಗದ ನಾಯಕರು ಚಾಮುಂಡಿ ಬೆಟ್ಟದಲ್ಲಿಂದು ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ಸಚಿವ ಈಶ್ವರಪ್ಪ ತಾಯಿ ಚಾಮುಂಡಿ ದರ್ಶನ ಪಡೆಯಲು ಆಗಮಿಸುತ್ತಿದ್ದಂತೆ ಗೋ ಬ್ಯಾಕ್ ಈಶ್ವರಪ್ಪ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಸಿದ್ಧರಾಮಯ್ಯನವರನ್ನು ವಡ್ಡ ಎಂದು ಈಶ್ವರಪ್ಪ ನಿಂದಿಸಿದ್ದರು. ಈ ಪದ ಬಳಕೆಯಿಂದ ಅಸಮಾಧಾನಗೊಂಡ ಬೋವಿ ಸಮುದಾಯದ ನಾಯಕರು ಈಶ್ವರಪ್ಪ ಬೆಟ್ಟಕ್ಕೆ ಬರುತ್ತಿದ್ದಂತೆ ಪ್ರತಿಭಟನೆ ನಡೆಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ನಾವು ಕಲ್ಲು ಹೊಡೆದು ಜೀವನ ಮಾಡುವ ಜನ. ನಮ್ಮ ಜಾತಿ ನಿಂದನೆ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಸಚಿವರು ನನಗೆ ಬೋವಿ ಜನಾಂಗದ ಬಗ್ಗೆ ಯಾವುದೇ ದ್ವೇಷ ಇಲ್ಲ. ಗ್ರಾಮೀಣ ಆಡು ಭಾಷೆಯಲ್ಲಿ ಆ ರೀತಿ ಪದ ಬಳಕೆ ಮಾಡಿದೆ. ಇದನ್ನೇ ತಪ್ಪು ಎಂದು ಭಾವಿಸಬಾರದು. ನಿಮ್ಮ ಮೇಲೆ ನನಗೆ ಅಪಾರ ಗೌರವವಿದೆ ಎಂದು ಸಮಾಧಾನ ಪಡಿಸಿದರು.
ಸಚಿವರ ಮಾತಿನಿಂದ ಸಮಾಧಾನಗೊಂಡ ನಾಯಕರು ಪ್ರತಿಭಟನೆಯನ್ನು ನಿಲ್ಲಿಸಿ, ಪೂಜೆಗೆ ಅನುವು ಮಾಡಿಕೊಟ್ಟರು. ನಂತರ ಸಚಿವರು ನಗುಮೊಗದಿಂದಲೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Leave a Comment