ಈವರೆಗೆ 768 ಜನರ ಆಗಮನ 3,080 ಜನ ನಿರ್ಗಮನ

ಧಾರವಾಡ,ಮೇ.15: ಲಾಕ್‍ಡೌನ್ ಅವಧಿಯಲ್ಲಿ ವಿಶೇಷ ಪರವಾನಿಗೆ ಪಡೆದು ಜಿಲ್ಲೆಗೆ ಈವರೆಗೆ ಹೊರರಾಜ್ಯಗಳಿಂದ 768 ಜನರು ಆಗಮಿಸಿದ್ದಾರೆ. ಕಳೆದ ಎರಡು ದಿನಗಳಿಂದ ವಿಶೇಷ ರೈಲುಗಳ ಮೂಲಕ 2830 ಜನ ಸೇರಿ ಒಟ್ಟು 3,080 ಜನರು ಹೊರರಾಜ್ಯಗಳಿಗೆ ನಿರ್ಗಮಿಸಿದ್ದಾರೆ.
ಮೇ.7 ರಿಂದ  ಮೇ. 14 ರ ವರೆಗೆ ಆಂಧ್ರಪ್ರದೇಶ-42, ಗೋವಾ-194, ಗುಜರಾತ್-66, ಕೇರಳ-02, ಮಹಾರಾಷ್ಟ್ರ-340, ರಾಜಸ್ಥಾನ-22, ತಮಿಳುನಾಡು-51, ತೆಲಂಗಾಣ-41, ಮದ್ಯಪ್ರದೇಶ-02, ಉತ್ತರ ಪ್ರದೇಶ-08 ಜನ ಸೇರಿ ಒಟ್ಟು 768 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರಲ್ಲಿ 248 ಜನ ಹೊಟೇಲ್ ಕ್ವಾರಂಟೈನ್ ಹಾಗೂ 505 ಜನ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ. ಆಗಮಿಸುವ ಎಲ್ಲ ಜನರ ನೋಂದಣಿ, ಆರೋಗ್ಯ ತಪಾಸಣೆ ಮತ್ತು ಸ್ವ್ಯಾಬ್ ಸಂಗ್ರಹಣಾ ಕಾರ್ಯ ಧಾರವಾಡ ಕೃಷಿ ವಿ.ವಿ. ಆವರಣ ಹಾಗೂ ಹುಬ್ಬಳ್ಳಿಯ ತಡಸ ಕ್ರಾಸ್ ಬಳಿ ಚೆಕ್‍ಪೋಸ್ಟ್ ನಲ್ಲಿ ನಡೆಯುತ್ತಿದೆ.  ಅವಳಿ ನಗರದ ಎಲ್ಲ ಸರ್ಕಾರಿ ಹಾಸ್ಟೇಲ್‍ಗಳು, ಕರ್ನಾಟಕ ವಿ.ವಿ. ಮತ್ತು ಕೃಷಿ ವಿ.ವಿ.ಯ ವಿದ್ಯಾರ್ಥಿನಿಲಯಗಳನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಗುರುತಿಸಲಾಗಿದೆ. ಹೊಟೇಲ್‍ಗಳಲ್ಲಿ ಸ್ವಂತ ವೆಚ್ಚ ಭರಿಸಿ ಕ್ವಾರಂಟೈನ್ ಇರಬಯಸುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನೋಡಲ್ ಅಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ಹಂಚಾಟೆ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಜಿಲ್ಲೆಯಿಂದ ರಾಜ್ಯದೊಳಗಿನ ವಿವಿಧ ಜಿಲ್ಲೆಗಳಿಗೆ ಸುಮಾರು 2,000 ಜನರನ್ನು ಕಳುಹಿಸಲಾಗಿದೆ. ಇದೀಗ ಹೊರರಾಜ್ಯಗಳಿಗೆ ಶ್ರಮಿಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೇ.13 ರಂದು 1,452 ಹಾಗೂ ಮೇ.14 ರಂದು 1,378 ಜನರನ್ನು ಕಳುಹಿಸಲಾಗಿದೆ. ಇದಲ್ಲದೆ ಬಸ್‍ಗಳ ಮೂಲಕ ಈಗಾಗಲೇ 250 ಜನರು ಸೇರಿ ಹೊರರಾಜ್ಯಗಳಿಗೆ ಈವರೆಗೆ ಒಟ್ಟು 3,080 ಜನರು ನಿರ್ಗಮಿಸಿದ್ದಾರೆ ಎಂದು ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಎನ್.ಆರ್. ಪುರುಷೋತ್ತಮ ಹೇಳಿದ್ದಾರೆ.
ಮೇ.17 ರಂದು ಉತ್ತರಪ್ರದೇಶ, ಬಿಹಾರ ಹಾಗೂ ಮೇ.19 ರಂದು ಜಾರ್ಖಂಡ್‍ಗೆ ವಿಶೇಷ ರೈಲು : ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮೇ.17 ರಂದು ಉತ್ತರಪ್ರದೇಶದ ಮೂಲಕ ಬಿಹಾರದ ಕಟಿಯಾರ ರೈಲುನಿಲ್ದಾಣಕ್ಕೆ ಹಾಗೂ   ಮೇ.19 ರಂದು ಜಾರ್ಖಂಡ್ ರಾಜ್ಯಕ್ಕೆ  ವಿಶೇಷ ಶ್ರಮಿಕ ಎಕ್ಸ್‍ಪ್ರೆಸ್ ರೈಲುಗಳು ಹೊರಡಲಿವೆ. ಈಗಾಗಲೇ ಸೇವಾಸಿಂಧು ವೆಬ್‍ಪೋರ್ಟಲ್ ಮೂಲಕ ನೊಂದಾಯಿಸಿಕೊಂಡಿರುವವರು ಹಾಗೂ ಅರ್ಜಿ ತಿರಸ್ಕೃತಗೊಂಡವರು ಕೂಡಾ ಈ ಸೌಲಭ್ಯ ಬಳಸಿಕೊಂಡು ತಮ್ಮ ತವರು ರಾಜ್ಯಗಳಿಗೆ ತೆರಳಬಹುದು. ನಿಗದಿತ ದಿನಾಂಕಗಳಂದು ಮುಂಜಾನೆ ಅಗತ್ಯ ದಾಖಲೆಗಳೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿ ಹೆಸರು ನೋಂದಾಯಿಸಿಕೊಂಡು ಟಿಕೇಟ್ ಪಡೆದು ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Comment