ಈಝಿ ಮೈಂಡ್ ವಂಚನೆ: 45ಕ್ಕೂ ಅಧಿಕ ದೂರು

ತುಮಕೂರು, ಜೂ. ೧೯- ನಗರದಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಚನಾಸ್ ಈಝಿ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪೆನಿಗಳಿಂದ ವಂಚನೆಗೊಳಗಾದವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪೊಲೀಸರಿಗೆ ದೂರು ನೀ‌ಡಿದವರ ಸಂಖ್ಯೆ 45 ದಾಟಿದೆ. ಈವರೆಗಿನ ದೂರುಗಳ ಪ್ರಕಾರ ಸುಮಾರು 1 ಕೋಟಿ 60 ಲಕ್ಷ ರೂ.ಗಳಷ್ಟು ವಂಚನೆ ಆಗಿದೆ ಎಂದು ಅಂದಾಜಿಸಲಾಗಿದೆ.

ದೂರನ್ನು ಹೊತ್ತು ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಮಹಿಳೆಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ದೂರುದಾರರಲ್ಲಿ ಬಹುತೇಕ ಜನರು ತುಮಕೂರಿನವರೇ ಆಗಿದ್ದಾರೆ. ಕನಿಷ್ಟ 50 ಸಾವಿರ ರೂ.ಗಳಿಂದ ಆರಂಭಿಸಿ 2-3ಲಕ್ಷ ರೂ.ಗಳವರೆಗೆ ಜನರು ಹೂಡಿಕೆ ಮಾಡಿ, ಈಗ ಸಂಕಷ್ಟಕ್ಕೀಡಾಗಿದ್ದಾರೆ.

ಸುಮಾರು 1,500 ಜನರು ಇಲ್ಲಿ ಹೂಡಿಕೆ ಮಾಡಿರಬಹುದು. ಒಟ್ಟು ಸುಮಾರು 35 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚನೆ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಈ ಪ್ರಕರಣದ ಬಗ್ಗೆ ನಗರ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದೂರು ಸ್ವೀಕರಿಸುವುದರ ಜೊತೆಯಲ್ಲೇ ವಿವಿಧ ರೀತಿಯ ಮಾಹಿತಿಗಳನ್ನೂ ಸಂಗ್ರಹಿಸುತ್ತಿದ್ದಾರೆ. ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದು, ಆರೋಪಿಯ ಕುಟುಂಬ ವರ್ಗ, ಸಂಬಂಧಿಗಳನ್ನೂ ವಿಚಾರಣೆ ಮಾಡುತ್ತಿದ್ದಾರೆ. ಈ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನೂ ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಖಚಿತ ಮಾಹಿತಿ ಪ್ರಕಾರ ಜನರಿಗೆ ವಂಚಿಸಿರುವ ಈ ಕಂಪೆನಿಗಳು ಸರ್ಕಾರದ ನಿಯಮಾವಳಿಗಳಂತೆ ನೋಂದಣಿ ಆಗಿಯೇ ಇಲ್ಲ! ಯಾವುದೇ ನೋಂದಣಿ ಮಾಡದೆ ಇಲ್ಲಿ ವ್ಯವಹಾರ ನಡೆಸಲಾಗಿದೆ. ಹೂಡಿಕೆದಾರರೂ ಹಣವನ್ನು ಹೂಡುವಾಗ ಈ ಬಗ್ಗೆ ಗಮನಹರಿಸುವ ಗೊಡವೆಗೇ ಹೋಗಿಲ್ಲವೆಂದು ಹೇಳಲಾಗುತ್ತಿದೆ.

2018 ರ ಏಪ್ರಿಲ್ 18 ರಂದು ಆರಂಭವಾಗಿದ್ದ ಈ ಕಂಪೆನಿಗಳು ಇದೀಗ ಬಾಗಿಲು ಹಾಕದ್ದು, ಈ ಅವಧಿಯಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿದ್ದು, ಕೋಟ್ಯಂತರ ರೂ.ಗಳ ವಹಿವಾಟು ನಡೆಸಿವೆ. ಆದರೆ ಇದೀಗ ಸದರಿ ಕಂಪೆನಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು ತನಿಖೆಯ ಉದ್ದೇಶದಿಂದ ಪೊಲೀಸರು ಪರಿಶೀಲನೆ ಮಾಡಿದಾಗ ಒಟ್ಟಾರೆ ಸುಮಾರು ಆರು ಲಕ್ಷ ರೂ.ಗಳು ಮಾತ್ರ ಖಾತೆಯಲ್ಲಿರುವುದು ಕಂಡು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Leave a Comment