ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು

ಕುಣಿಗಲ್, ನ. ೧೮- ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನಾಪುರದಲ್ಲಿ ನಡೆದಿದೆ.
ತಾಲ್ಲೂಕಿನ ಬಿದನಗೆರೆ ಗ್ರಾಮದ ಪವನ್ (11) ಹಾಗೂ ಗಗನ್ (11) ಎಂಬುವರೇ ನೀರು ಪಾಲಾಗಿರುವ ದುರ್ದೈವಿ ಬಾಲಕರು. ಸದರಿ ಬಾಲಕರು ಸ್ನೇಹಿತರಾದ ದಿಲೀಪ್, ಕುಶಾಲ್, ನಿಖಿಲ್, ತೇಜ ಎಂಬುವರೊಂದಿಗೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ 6 ಮಂದಿ ಸ್ನೇಹಿತರು ಎಂದಿನಂತೆ ಬೇಗೂರು ಕೆರೆಯಲ್ಲಿ ಈಜಲು ತೆರೆಳಿದ್ದರು. ಅಲ್ಲಿನ ಸ್ಥಳೀಯರು ಈಜಲು ಬಿಡದೆ ವಾಪಸ್ ಕಳುಹಿಸಿದ್ದರೆನ್ನಲಾಗಿದೆ. ಆಗ ಚನ್ನಾಪುರದ ತೇಜ ಎಂಬಾತ ತಮ್ಮ ಊರಿನ ಕೆರೆಯಲ್ಲಿ ಈಜಲು ಕರೆದುಕೊಂಡು ಹೋಗಿದ್ದನು. ಮೊದಲು ಪವನ್ ಹಾಗೂ ಗಗನ್ ಕೆರೆಗೆ ಇಳಿದಿದ್ದಾರೆ. ಮತ್ತೊಬ್ಬರು ಈಜಲು ಇಳಿಯುತ್ತಿದ್ದಂತೆ ನೀರಿನಲ್ಲಿ ಇವರಿಬ್ಬರು ಮುಳುಗುತ್ತಿರುವುದನ್ನು ನೋಡಿ ಉಳಿದವರು ನೀರಿಗೆ ಇಳಿಯದೆ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬಾಲಕರಿಬ್ಬರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಮೃತ ಬಾಲಕರ ಪೋಷಕರು ಸುದ್ದಿ ತಿಳಿದ ತಕ್ಷಣ ಕೆರೆ ಬಳಿಗೆ ಓಡಿ ಬಂದಿದ್ದು, ಇವರ ಆಕ್ರಂದನ ಹೇಳತೀರದಾಗಿತ್ತು.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment